ಸಮಾಜ ಸೇವೆಯ ಹೆಸರಲ್ಲಿ ಡ್ರಗ್ಸ್ ದಂಧೆ ; ಜಲೀಲ್ ಬಾಬಾ ದುಬೈಗೆ ಎಸ್ಕೇಪ್ ಆಗಿರುವ ಶಂಕೆ, ಶೋಕಿಲಾಲನ ಬೆನ್ನತ್ತಿದ ಸಿಸಿಬಿ !

27-07-26 11:47 am       HK News Staffer   ಕ್ರೈಂ

ಆಂಬುಲೆನ್ಸ್ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಬೆಳ್ತಂಗಡಿಯ ಬಾಬಾ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಬಂಧನ ಭೀತಿಯಿಂದ ದುಬೈಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಜಲೀಲ್‌ಗಾಗಿ ಮಂಗಳೂರು ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದು, ಆತನ ಚಲನವಲನಗಳ ಕುರಿತು ಮಹತ್ವದ ಮಾಹಿತಿ ಕಲೆಹಾಕುತ್ತಿದ್ದಾರೆ.

ಮಂಗಳೂರು, ಜುಲೈ 27: ಆಂಬುಲೆನ್ಸ್ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಆರೋಪ ಎದುರಿಸುತ್ತಿರುವ ಬೆಳ್ತಂಗಡಿಯ ಬಾಬಾ ಆಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಬಂಧನ ಭೀತಿಯಿಂದ ದುಬೈಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಜಲೀಲ್‌ಗಾಗಿ ಮಂಗಳೂರು ಸಿಸಿಬಿ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದು, ಆತನ ಚಲನವಲನಗಳ ಕುರಿತು ಮಹತ್ವದ ಮಾಹಿತಿ ಕಲೆಹಾಕುತ್ತಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಜುಲೈ 25ರಂದು ಸ್ನೇಹಿತರ ಸಹಾಯದಿಂದ ಜಲೀಲ್ ಬೆಂಗಳೂರಿನ ಮೂಲಕ ದುಬೈಗೆ ತೆರಳಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಈ ಬಗ್ಗೆ ಪ್ರಯಾಣದ ದಾಖಲೆಗಳು ಹಾಗೂ ಇತರ ತಾಂತ್ರಿಕ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇತ್ತೀಚೆಗೆ ಬಾಗಲಕೋಟೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸರು ಸುಮಾರು ₹5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. ತನಿಖೆ ವೇಳೆ ಈ ಜಾಲದ ನಾಲ್ಕನೇ ಆರೋಪಿಯಾಗಿ ಜಲೀಲ್ ಹೆಸರು ಹೊರಬಂದಿದ್ದು, ಮೂವರು ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ಆತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆಂಬುಲೆನ್ಸ್ ಸಮೇತ ನಾಪತ್ತೆಯಾಗಿದ್ದಾನೆ.

ತನಿಖೆಯಲ್ಲಿ ಜಲೀಲ್ ಜಿಲ್ಲೆಯಲ್ಲಿ ಆಂಬುಲೆನ್ಸ್ ಬಳಸಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಆತನ ಬಂಧನಕ್ಕಾಗಿ ಮಂಗಳೂರು ಸಿಸಿಬಿ ವಿಶೇಷ ತಂಡ ರಚಿಸಿ ವಿವಿಧ ಆಯಾಮಗಳಲ್ಲಿ ಶೋಧ ನಡೆಸುತ್ತಿದೆ. ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಬಂಧಿತ ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಮಾಹಿತಿ ವಿನಿಮಯವೂ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಮಾಜ ಸೇವೆಯ ಮುಖವಾಡದ ಹಿಂದೆ ಡ್ರಗ್ಸ್‌ ಜಾಲ;

ಬೆಳ್ತಂಗಡಿಯಲ್ಲಿ ಸಮಾಜಸೇವಕ ಹಾಗೂ "ಆಂಬುಲೆನ್ಸ್ ಹೀರೋ" ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಜಲೀಲ್ ಬಾಬಾ ವಿರುದ್ಧ ಇದೀಗ ಮಾದಕ ವಸ್ತು ಜಾಲದ ಗಂಭೀರ ಆರೋಪ ಕೇಳಿಬಂದಿದೆ. ಆಂಬುಲೆನ್ಸ್ ಸೇವೆಯ ಮುಖವಾಡದ ಹಿಂದೆ ಡ್ರಗ್ಸ್ ಸರಬರಾಜು ಜಾಲ ನಡೆಸುತ್ತಿದ್ದಾನೆ ಎಂಬ ಆರೋಪದ ಬೆನ್ನಲ್ಲೇ ಆತ ನಾಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಜಿಲ್ಲೆಯ ಜನರಲ್ಲಿ ಉತ್ತಮ ವ್ಯಕ್ತಿಯೆಂಬ ಭಾವನೆ ಮೂಡಿಸಿಕೊಂಡಿದ್ದ ಜಲೀಲ್ ವಿರುದ್ಧ ಹೊರಬಿದ್ದಿರುವ ಆರೋಪಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಆತನ ಬಂಧನಕ್ಕಾಗಿ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.