Ramanth Rai Car Accident: ಕಾರ್ಕಳ ; ಮಾಜಿ ಸಚಿವ ರಮಾನಾಥ ರೈ ಅವರಿದ್ದ ಕಾರು ಅಪಘಾತ, ಖಾಸಗಿ ಬಸ್ ಡಿಕ್ಕಿಯಾಗಿ ಇನ್ನೋವಾ ಕಾರು ಜಖಂ, ರೈ ಸೇರಿದಂತೆ ಹಲವರಿಗೆ ಗಾಯ

20-09-26 04:39 pm       HK News Staffer   ಕ್ರೈಂ

ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಅವರಿದ್ದ ಇನೋವಾ ಕಾರಿಗೆ ಬಸ್ ಡಿಕ್ಕಿಯಾದ ಘಟನೆ ಕಾರ್ಕಳ - ಮೂಡುಬಿದ್ರೆ ಹೆದ್ದಾರಿಯ ಸಾಣೂರು ಎಂಬಲ್ಲಿ ನಡೆದಿದ್ದು ರಮಾನಾಥ ರೈ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಕಾರ್ಕಳ, ಸೆ.20: ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಅವರಿದ್ದ ಇನೋವಾ ಕಾರಿಗೆ ಬಸ್ ಡಿಕ್ಕಿಯಾದ ಘಟನೆ ಕಾರ್ಕಳ - ಮೂಡುಬಿದ್ರೆ ಹೆದ್ದಾರಿಯ ಸಾಣೂರು ಎಂಬಲ್ಲಿ ನಡೆದಿದ್ದು ರಮಾನಾಥ ರೈ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. 

ರಮಾನಾಥ ರೈ ಅವರು ತಮ್ಮ ಕಾರಿನಲ್ಲಿ ಮೂಡುಬಿದ್ರೆಯಿಂದ ಕಾರ್ಕಳ ತಾಲೂಕಿನ ಬಜಗೋಳಿ ಕಡೆಗೆ ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದರು. ಇದೇ ವೇಳೆ, ಕಾರ್ಕಳದಿಂದ ಮೂಡುಬಿದ್ರೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಸಾಣೂರು ತಿರುವಿನಲ್ಲಿ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನ ಮುಂಭಾಗದಲ್ಲಿ ಕುಳಿತಿದ್ದ ರಮಾನಾಥ ರೈ ಮತ್ತು ಚಾಲಕನಿಗೆ ಪೆಟ್ಟು ಬಿದ್ದಿದ್ದು ಅವರನ್ನು ಸ್ಥಳೀಯರು ಸೇರಿ ಹೊರಗೆಳೆದು ಕಾರ್ಕಳದ ಕೆಎಂಸಿ ಅಧೀನದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ರೈಯವರ ಪಿಎ ಡೆಂಜಿಲ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ ಆರು ಮಂದಿಗೆ ಗಾಯಗಳಾಗಿವೆ. 

ಕಾರು ಮತ್ತು ಬಸ್ಸಿನಲ್ಲಿದ್ದ ಮಹಿಳೆ ಸೇರಿ ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ರಮಾನಾಥ ರೈ ಅವರನ್ನು ಇಂದು ಸಂಜೆಯೇ ಮಂಗಳೂರಿಗೆ ತರಲಾಗುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆಂದು ಆಪ್ತರು ತಿಳಿಸಿದ್ದಾರೆ.

Former minister and senior Congress leader Ramanath Rai was injured after a private bus collided head-on with the Innova car in which he was travelling at Sanuru on the Karkala–Moodbidri highway on Sunday. Several others also sustained injuries in the accident.