ಫೇಸ್ಬುಕ್ ಪರಿಚಯದಲ್ಲಿ ಯುವಕನಿಗೆ ಹನಿಟ್ರ್ಯಾಪ್ ಗಾಳ ; ಕಾಟಿಪಳ್ಳದ ಮಹಿಳೆಯರ ಸಹಿತ ನಾಲ್ವರು ಪೊಲೀಸ್ ಬಲೆಗೆ !!

18-01-21 11:31 am       Mangalore Correspondent   ಕ್ರೈಂ

ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ವ್ಯಕ್ತಿಯೊಬ್ಬನನ್ನು ಹನಿಟ್ರ್ಯಾಪ್‌ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು ಮಂಗಳೂರು ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. 

ಮಂಗಳೂರು ‌, ಜ.18 : ಫೇಸ್ಬುಕ್ ಮೂಲಕ ಪರಿಚಯ ಮಾಡಿಕೊಂಡು ಕೇರಳ ಮೂಲದವರನ್ನು ತಮ್ಮ ಬಲೆಗೆ ಬೀಳಿಸಿ ಹನಿಟ್ರ್ಯಾಪ್‌ ಮಾಡುತ್ತಿದ್ದ ಜಾಲವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ಕಾಟಿಪಳ್ಳದ ಕೃಷ್ಣಾಪುರದ ಅಕ್ಕ, ತಂಗಿಯರು ಸೇರಿ ದಂಪತಿ ಹಾಗೂ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. 

ಕಾಟಿಪಳ್ಳ ಕೃಷ್ಣಾಪುರದ ರೇಷ್ಮಾ ಅಲಿಯಾಸ್ ನೀಮಾ, ಆಕೆಯ ತಂಗಿ ಜೀನತ್ ಮುಬೀನ್, ಜೀನತ್ ಗಂಡ ಮಹಮ್ಮದ್ ಇಕ್ಬಾಲ್ ಮತ್ತು ಚೊಕ್ಕಬೆಟ್ಟು ನಿವಾಸಿ ಅಬ್ದುಲ್ ಖಾದರ್ ನಾಸಿಫ್ ಬಂಧಿತರು. 

ನೀಮಾ ಮತ್ತು ಮುಬೀನ್ ಸೋದರಿಯರಾಗಿದ್ದು ಫೇಸ್ಬುಕ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಬಲೆ ಬೀಸುತ್ತಿದ್ದರು. ಕೇರಳ ಮೂಲದವರನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸುತ್ತಾ ಮನೆಯಲ್ಲಿ ಒಬ್ಬಂಟಿಯಾಗಿದ್ದು ಮನೆಗೆ ಬರುವಂತೆ ಆಹ್ವಾನ ನೀಡುತ್ತಾರೆ. ಸುರತ್ಕಲ್ ಬಳಿಗೆ ಬರಲು ಹೇಳಿ, ಅಲ್ಲಿಂದ ಬಂದವರ ವಾಹನದಲ್ಲೇ ತಾವು ಇರುತ್ತಿದ್ದ ಅಪಾರ್ಟ್ಮೆಂಟ್ ಗೆ ಕರೆದೊಯ್ಯುತ್ತಿದ್ದರು. ಮನೆಗೆ ತೆರಳುವಷ್ಟರಲ್ಲಿ ಹಿಂದಿನಿಂದಲೇ ಇಕ್ಬಾಲ್ ಮತ್ತು ನಾಸೀಫ್ ಫಾಲೋ ಮಾಡಿಕೊಂಡು ಬರುತ್ತಿದ್ದುದಲ್ಲದೆ ಮನೆಯ ಒಳಗೆ ಹೋಗುತ್ತಿದ್ದಂತೆ ತಮ್ಮ ಮನೆಗೆ ಬಂದ ಆಗಂತುಕರ ರೀತಿ ವರ್ತಿಸುತ್ತಿದ್ದರು. ಅವರನ್ನು ವಿವಸ್ತ್ರಗೊಳಿಸಿ ಫೋಟೊ ತೆಗೆದು, ಅತ್ಯಾಚಾರ ಕೇಸು ದಾಖಲಿಸುತ್ತೇವೆಂದು ಬೆದರಿಸುತ್ತಿದ್ದರು. ಇಂತಿಷ್ಟು ಹಣ ಕೊಟ್ಟರೆ ಬಿಡುತ್ತೇವೆಂದು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಖದೀಮರ ವೃತ್ತಾಂತ ಬಿಚ್ಚಿಟ್ಟ 5 ಲಕ್ಷದ ಪ್ರಕರಣ ! 

ಇತ್ತೀಚೆಗೆ ಇದೇ ರೀತಿ ಕಾಸರಗೋಡಿನ ಕುಂಬಳೆಯ ವ್ಯಕ್ತಿಯನ್ನು ಬಲೆಗೆ ಬೀಳಿಸಿ, 5 ಲಕ್ಷ ರೂ.ಗೆ ಬೇಡಿಕೆ ಇಟ್ಟ ಬಗ್ಗೆ  ಪ್ರಕರಣ ದಾಖಲಾಗಿತ್ತು. ಕಾಸರಗೋಡಿನ ಕುಂಬಳೆ ಮೂಲದ ಯುವಕನಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಕೃಷ್ಣಾಪುರದ ಮಹಿಳೆಯರು, ಸುರತ್ಕಲ್‌ ಸಮೀಪದ ಕೃಷ್ಣಾಪುರಕ್ಕೆ ಬರುವಂತೆ ತಿಳಿಸಿದ್ದರು. ಮಹಿಳೆಯರ ಜೊತೆ ತೆರಳಿದ್ದ ಕುಂಬಳೆಯ ಯುವಕನನ್ನು ಮತ್ತಿಬ್ಬರು ಯುವಕರು ಸೇರಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಫೋಟೋ ತೆಗೆದು 5 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಯುವಕ ವಿಧಿಯಿಲ್ಲದೆ ತನ್ನ ಕಾರನ್ನು ಒತ್ತೆಯಿಟ್ಟು ಹಣ ಮತ್ತೆ ಕೊಡುವುದಾಗಿ ಹೇಳಿ ತೆರಳಿದ್ದ. ಆದರೆ, ಹಣಕ್ಕಾಗಿ ತಂಡ ಮತ್ತೆ ಪೀಡಿಸತೊಡಗಿತ್ತು. ಕಿರುಕುಳ ಹೆಚ್ಚಿದ್ದರಿಂದ ಯುವಕ ಕೊನೆಗೆ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ದೂರು ಪಡೆದು, ಯುವಕನ ಮೂಲಕವೇ ತಂಡವನ್ನು ಟ್ರ್ಯಾಪ್ ಮಾಡಿದ್ದರು. 30 ಸಾವಿರ ರೂ. ನೀಡುವುದಾಗಿ ಯುವಕ ಆರೋಪಿಗಳನ್ನು ಮಂಗಳೂರಿನ ಪಂಪ್‌ವೆಲ್‌ಗೆ ಬರುವಂತೆ ಸೂಚಿಸಿದ್ದ. ಹಣ ಪಡೆಯಲು ಬಂದ ಸಂದರ್ಭ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಬಳಿಕ ಪ್ರಕರಣವನ್ನು ಸುರತ್ಕಲ್‌ ಪೊಲೀಸರಿಗೆ ಹಸ್ತಾಂತರಿಸಿದ್ದು ಆರೋಪಿಗಳ ಮೊಬೈಲ್ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹೈಟೆಕ್ ಹನಿಟ್ರ್ಯಾಪ್ ಜಾಲ ಬಯಲಾಗಿದೆ. ಇದೇ ತಂಡದಿಂದ ಹಲವಾರು ಮಂದಿಗೆ ವಂಚನೆ ನಡೆಸಿದ್ದು ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲಿನಲ್ಲಿ ಹಲವರ ಜೊತೆ ಚಾಟ್ ಮಾಡಿ, ಬ್ಲಾಕ್ ಮೇಲ್ ಮಾಡಿರುವ ವಿಚಾರ ಪತ್ತೆಯಾಗಿದೆ. ಮೋಸಕ್ಕೊಳಗಾದ ಮತ್ತೆ ನಾಲ್ವರನ್ನು ಸಂಪರ್ಕಿಸಲಾಗಿದೆ ಎಂದು ಪ್ರಕರಣದ ಬಗ್ಗೆ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಮಂಗಳೂರು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

The CCB police have arrested four persons including two women involved in Honey Trap in Surathkal via Facebook and for demanding 5 Lakhs rupees.