ಸಿನಿಮೀಯ ರೀತಿಯಲ್ಲಿ ಯುವತಿಯ ಕಿಡ್ನಾಪ್

13-08-20 01:44 pm       Headline Karnataka News Network   ಕ್ರೈಂ

ಹಾಡಹಗಲೇ ಯುವತಿ ಹಾಗು ಅವರ ತಂಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ, ದುಷ್ಕರ್ಮಿಗಳು ಇನ್ನೋವಾ ಕಾರಲ್ಲಿ ಬಂದು ಅಪಹರಣ ಮಾಡಿರುವ ಸಿನಿಮೀಯ ಘಟನೆ ಕೋಲಾರ ನಗರದ ಎಂಬಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ‌‌ ಸುಮಾರು 11.45 ರ ವೇಳೆಗೆ ನಡೆದಿದೆ.

ಕೋಲಾರ, ಆಗಸ್ಟ್‌ 13: ಹಾಡಹಗಲೇ ಯುವತಿ ಹಾಗು ಅವರ ತಂಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ, ದುಷ್ಕರ್ಮಿಗಳು ಇನ್ನೋವಾ ಕಾರಲ್ಲಿ ಬಂದು ಅಪಹರಣ ಮಾಡಿರುವ ಸಿನಿಮೀಯ ಘಟನೆ ಕೋಲಾರ ನಗರದ ಎಂಬಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ‌‌ ಸುಮಾರು 11.45 ರ ವೇಳೆಗೆ ನಡೆದಿದೆ. ನಗರದ ಕಿಲ್ಲಾರಿಪೇಟೆ ಬಡಾವಣೆಯ 23 ವರ್ಷದ ಯುವತಿಯನ್ನ ನಗರದ ನಿವಾಸಿ ಶಿವು ಹಾಗು ಅವರ ಸ್ನೇಹಿತರು ಇನ್ನೋವಾ ಕಾರಲ್ಲಿ ಕಿಡ್ನಾಪ್ ಮಾಡಿರುವುದಾಗಿ ಪೋಷಕರು ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಯುವತಿ ಹಾಗು ತಂಗಿ ರಸ್ತೆಯಲ್ಲಿ ನಡೆದು ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ, ಇನ್ನೋವಾ ಕಾರಲ್ಲಿ ಎದುರಿಗೆ ಬಂದ ದುಷ್ಕರ್ಮಿಗಳು ಸ್ವಲ್ಪ ದೂರಕ್ಕೆ ಕಾರು ನಿಲ್ಲಿಸಿ ಯುವತಿಯನ್ನ ಎಳೆದೊಯ್ದಿರುವ ದೃಶ್ಯಗಳು ಪಕ್ಕದ ಎಲೆಕ್ಟ್ರಾನಿಕ್ ಮಳಿಗೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಯುವತಿಯ ತಂಗಿ ಬಿಡಿಸಲು ಹೋದಾಗ ಬಲವಾಗಿ ತಳ್ಳಿ, ಕ್ಷಣ ಮಾತ್ರದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಹರಣ ಮಾಡಿದಾಗ ಕಾರಲ್ಲಿ ನಾಲ್ವರು ಇದ್ದರು ಎನ್ನಲಾಗಿದ್ದು, ಶಿವು ಹಾಗು ಅವರ ಸ್ನೇಹಿತರು ಕೃತ್ಯದಲ್ಲಿ ಭಾಗಯಾಗಿರುವ ಆರೋಪವಿದೆ.

ಯುವತಿಯು ಬಿಎಸ್ಸಿ ಓದುತ್ತಿದ್ದು ಪರಸ್ಪರ ಒಬ್ಬರಿಗೊಬ್ಬರು ಪರಿಚಯವೂ ಇದೆ. ಪರಿಚಯ ಪ್ರೀತಿಗೆ ತಿರುಗಿದ್ದು, ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಬಂದಾಗ ಯುವತಿ ತನ್ನ ಪೋಷಕರ ಒಪ್ಪಿಗೆ ಬೇಕಿದೆ ಎಂದಿದ್ದಾರೆ. ಇಬ್ಬರ ಪ್ರೀತಿಗೆ ಪೋಷಕರು ವಿರೋಧ ಮಾಡಿದ್ದಾರೆ. ಇದರಿಂದ ಕೆರಳಿರುವ ಭಗ್ನ ಪ್ರೇಮಿ ಶಿವು, ಕಿಡ್ನಾಪ್​ನಂತಹ ದುಷ್ಕೃತ್ಯಕ್ಕೆ ಕೈ ಹಾಕಿದ್ದಿರಬಹುದು ಎಂದು ಶಂಕಿಸಲಾಗಿದೆ.