ಕೆಎಸ್ಸಾರ್ಟಿಸಿ ಬಸ್ಸಿಗೆ ಸ್ಕೂಟರ್ ಅಡ್ಡ ಇಟ್ಟು ಚಾಲಕನ ಕೊಲೆ ಯತ್ನ ; ಆರೋಪಿ ಸೆರೆ

05-03-21 06:12 pm       Mangalore Correspondent   ಕ್ರೈಂ

ಬಸ್ ಚಾಲಕನಿಗೆ ಹಲ್ಲೆಗೈದು ಚೂರಿಯಿಂದ ತಿವಿಯಲು ಯತ್ನಿಸಿದ ಘಟನೆ ನಗರದ ಪಡೀಲ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ನಡೆದಿದೆ.‌

ಮಂಗಳೂರು, ಮಾ.5: ಸರಕಾರಿ ಬಸ್ಸಿನ ಮುಂದೆ ಅಡ್ಡಾದಿಡ್ಡಿ ಸವಾರಿ ಮಾಡಿಕೊಂಡು ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ, ಈ ಬಗ್ಗೆ ಪ್ರಶ್ನಿಸಿದ ಬಸ್ ಚಾಲಕನಿಗೆ ಹಲ್ಲೆಗೈದು ಚೂರಿಯಿಂದ ತಿವಿಯಲು ಯತ್ನಿಸಿದ ಘಟನೆ ನಗರದ ಪಡೀಲ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ನಡೆದಿದೆ.‌ ಪ್ರಕರಣ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಅಡ್ಯಾರ್ ಕಣ್ಣೂರಿನ ಸೈಫ್ (19) ಬಂಧಿತ. ಆರೋಪಿ ಕೃತ್ಯಕ್ಕೆ ಬಳದಸಿದ್ದ ಸ್ಕೂಟರನ್ನು ವಶಪಡಿಸಲಾಗಿದೆ. ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್ ಕಡೆಗೆ ಬರುತ್ತಿದ್ದ ಬಸ್ ಇದಾಗಿದ್ದು ಬೆಳಗ್ಗೆ 8.50 ರ ಸುಮಾರಿಗೆ ಬಸ್ ಕಣ್ಣೂರು ತಲುಪಿತ್ತು. ಈ ವೇಳೆ, ಸೈಫ್ ಬಸ್ ಮುಂಭಾಗದಲ್ಲಿ ಅಡ್ಡಾದಿಡ್ಡಿ ಚಲಿಸುತ್ತಾ ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾನೆ. ಅಲ್ಲದೆ, ಪ್ರಶ್ನೆ ಮಾಡಿದ ಬಸ್ ಚಾಲಕ ರಾಜು ಗಜಕೋಶ ಅವರ ಮೇಲೆ ಹಲ್ಲೆಗೈದು ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಚಾಲಕ ಪೊಲೀಸರಿಗೆ ದೂರು ನೀಡಿದ್ದ. ಬಸ್ಸಿಗೆ ತನ್ನ ಸ್ಕೂಟರ್ ಅಡ್ಡವಿಟ್ಟು ಬಸ್ ಚಾಲಕನಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಸ್ಕೂಟರ್‌ನಲ್ಲಿದ್ದ ಚಾಕು ತೋರಿಸಿ ಕೊಲೆ ಬೆದರಿ ಹಾಕಿ ತಿವಿಯಲು ಯತ್ನಿಸಿದ್ದಾನೆ ಎಂದು ದೂರಲಾಗಿದೆ. 

ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಕೊಲ್ಲಲು ಯತ್ನಿಸಿದ್ದಾನೆ ಎಂದು ರಾಜು ಗಜಕೋಶ ನೀಡಿದ ದೂರಿನಂತೆ ಕಂಕನಾಡಿ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆಯತ್ನ ಸಹಿತ ಐದು ಪ್ರಕರಣ ದಾಖಲಿಸಲಾಗಿದೆ.