ನಿವೃತ್ತ ಪೊಲೀಸ್ ಅಧಿಕಾರಿಗೇ ಪಂಗನಾಮ ! ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ಲಕ್ಷಾಂತರ ರೂ. ಲೂಟಿ

11-03-21 11:37 am       Mangalore Correspondent   ಕ್ರೈಂ

ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಲಕ್ಷಾಂತರ ರೂ. ಮೊತ್ತವನ್ನು ಖಾತೆಯಿಂದ ಲಪಟಾಯಿಸಿದ ಘಟನೆ ನಡೆದಿದೆ.

ಮಂಗಳೂರು, ಮಾ.11 : ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಗೆ ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ಒಟಿಪಿ ನಂಬರ್ ಪಡೆದು ಲಕ್ಷಾಂತರ ರೂ. ಮೊತ್ತವನ್ನು ಖಾತೆಯಿಂದ ಲಪಟಾಯಿಸಿದ ಘಟನೆ ನಡೆದಿದೆ.

ವಂಚನೆಗೆ ಒಳಗಾದ ನಿವೃತ್ತ ಪೊಲೀಸ್ ಅಧಿಕಾರಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಮಾ.4ರಂದು ಮಧ್ಯಾಹ್ನ ಇವರ ಮೊಬೈಲ್‌ಗೆ ಕರೆ ಬಂದಿತ್ತು. ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿ, ಬಂದರು ರಸ್ತೆಯಲ್ಲಿರುವ ಸ್ಟೇಟ್‌ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ಕಡಿತಗೊಂಡಿದ್ದು, ಅದರ ಮರುಪಾವತಿಗೆ ಒಟಿಪಿ ನಂಬರ್ ಹೇಳುವಂತೆ ಕೋರಿದ್ದರು. ಇದನ್ನು ನಿಜವೆಂದೇ ನಂಬಿದ ಈ ಅಧಿಕಾರಿಯ ಪುತ್ರ, ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆಯನ್ನು ಹೇಳಿದ್ದರು.

ಸ್ವಲ್ಪ ಹೊತ್ತಿನಲ್ಲಿ ಸರದಿಯಂತೆ ಖಾತೆಯಿಂದ ಹಣ ಕಡಿತಗೊಳ್ಳುತ್ತಿರುವ ಬಗ್ಗೆ ಮೊಬೈಲ್‌ಗೆ ಎಸ್‌ಎಂಎಸ್ ಬರಲಾರಂಭಿಸಿತ್ತು. ಕೊನೆಗೆ ಎಸ್‌ಬಿಐ ಖಾತೆಯಲ್ಲಿದ್ದ ಪೂರ್ತಿ 6.24 ಲಕ್ಷ ರೂ. ಕಡಿತಗೊಂಡಿದ್ದು ಮನೆಯವರು ಗಾಬರಿಗೊಂಡಿದ್ದರು. ದಿಗಿಲುಗೊಂಡ ನಿವೃತ್ತ ಅಧಿಕಾರಿ ಮರುದಿನ ಬ್ಯಾಂಕಿಗೆ ತೆರಳಿ ಪರಿಶೀಲಿಸಿದಾಗ, ವಿವಿಧ ಮೊತ್ತ ದೆಹಲಿಯ ನಾನಾ ಖಾತೆಗಳಿಗೆ ಜಮೆ ಆಗಿರುವುದು ಕಂಡುಬಂದಿದೆ. ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Mangalore Retired police officer duped of 6.24 lakhs by online fraud. A case has been registered at the cybercrime police station.