ಕೋವಿಡ್ ಸೋಂಕು ; ಮಾ.15ರಿಂದ ಶಾಲೆ, ಕಾಲೇಜಿಗೆ ರಜೆ ಘೋಷಿಸಿ ಸುತ್ತೋಲೆ ! ಕಿಡಿಗೇಡಿ ಕೃತ್ಯ

15-03-21 10:48 am       Mangalore Correspondent   ಕ್ರೈಂ

ಮಾ.15ರಿಂದ 30 ರ ವರೆಗೆ ಶಾಲೆ, ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿರುವ ಕಿಡಿಗೇಡಿ ಕೃತ್ಯ ಬೆಳಕಿಗೆ ಬಂದಿದೆ. 

ಮಂಗಳೂರು, ಮಾ.15: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾ.15ರಿಂದ 30 ರ ವರೆಗೆ ಶಾಲೆ, ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿರುವ ಕಿಡಿಗೇಡಿ ಕೃತ್ಯ ಬೆಳಕಿಗೆ ಬಂದಿದೆ. 

ಯಾರೋ ಕಿಡಿಗೇಡಿಗಳು ಶಿಕ್ಷಣ ಇಲಾಖೆಯ ಹಳೆ ಆದೇಶದ ಸುತ್ತೋಲೆಯನ್ನು ತಿರುಚಿ, ಅದರಲ್ಲಿ ದಿನಾಂಕವನ್ನು ಮಾತ್ರ ಮರು ತಿದ್ದುಪಡಿ ಮಾಡಿ ಆದೇಶದ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದರು. ಸುತ್ತೋಲೆಯ ಪ್ರತಿ ಹರಡುತ್ತಿದ್ದಂತೆ ಮೊನ್ನೆಯಷ್ಟೇ ಆರಂಭಗೊಂಡ ಶಾಲೆ, ಕಾಲೇಜಿಗೆ ಮತ್ತೆ ರಜೆ ನೀಡಲಾಗಿದೆಯೇ ಎಂಬ ಬಗ್ಗೆ ಸಾರ್ವಜನಿಕರಿಗೆ ಕುತೂಹಲ ಎದ್ದಿತ್ತು. ಈ ಬಗ್ಗೆ ವಿವಿಧ ವಾಟ್ಸಪ್ ಗ್ರೂಪ್ ಗಳಲ್ಲಿ ಸುತ್ತೋಲೆ ಹರಿದಾಡುತ್ತಿದ್ದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. 

ಇದು ಫೇಕ್ ಲೆಟರ್ ಆಗಿದ್ದು ಯಾರೋ ಕಿಡಿಗೇಡಿಗಳು ದಿನಾಂಕ ಬದಲಿಸಿ ಈ ರೀತಿಯ ಸುತ್ತೋಲೆಯನ್ನು ಹಂಚಿಕೆ ಮಾಡಿದ್ದಾರೆ. ಇದರ ವಿರುದ್ಧ ಪೊಲೀಸ್ ದೂರು ನೀಡಲಿದ್ದೇವೆ. ಶಿಕ್ಷಣ ಇಲಾಖೆಯಿಂದ ಈ ರೀತಿಯ ಸುತ್ತೋಲೆ ಪ್ರಕಟಿಸಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದಲೂ ಇದೇ ರೀತಿಯ ಸ್ಪಷ್ಟನೆ ನೀಡಲಾಗಿದ್ದು ಸಾರ್ವಜನಿಕರು ಗಮನಿಸಲು ಕೋರಿದ್ದಾರೆ.

Some miscreants in Mangalore have circulated fake govt letter stating Holidays to schools and colleges from March 15th on Social Media.