ರೌಡಿಗಳಿಗೆ ಪಿಸ್ತೂಲ್ ಸಪ್ಲೈ ; ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ

12-06-21 04:57 pm       Bangalore Correspondent   ಕ್ರೈಂ

ಕಂಟ್ರಿಮೇಡ್ ಪಿಸ್ತೂಲ್ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪದಲ್ಲಿ ಕಲಬುರಗಿ ಮೂಲದ ನಟೋರಿಯಸ್ ರೌಡಿ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಜೂನ್ 12: ರೌಡಿ ಕಾಡುಬೀಸನಹಳ್ಳಿ ರೋಹಿತ್ ಈತನಿಗೆ ಕಂಟ್ರಿಮೇಡ್ ಪಿಸ್ತೂಲ್ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪದಲ್ಲಿ ಕಲಬುರಗಿ ಮೂಲದ ನಟೋರಿಯಸ್ ರೌಡಿ ಸೇರಿ ಮೂವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿಯ ಸತೀಶ್ ಅಲಿಯಾಸ್ ಮಾರ್ಕೆಟ್ ಸತೀಶ್ (38) ಬಂಧಿತ ಆರೋಪಿ. ಆರೋಪಿಯನ್ನು 15 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಇಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಡುಬೀಸನಹಳ್ಳಿ ಸೋಮ ಮತ್ತು ರೋಹಿತ್ ರೌಡಿಗಳಾಗಿದ್ದು, ಪರಸ್ಪರ ಹತ್ಯೆಗೆ ಸಂಚು ರೂಪಿಸಿದ್ದರು. ಎರಡು ತಿಂಗಳ ಹಿಂದೆ ರೋಹಿತ್, ಸೋಮನ ಹತ್ಯೆಗೆ ಸಂಚು ರೂಪಿಸಿ ಮಂಗಳೂರಿನಿಂದ ಯುವಕರನ್ನು ಕರೆಸಿದ್ದ. ಈ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ರೋಹಿತ್ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ರೋಹಿತ್ ಹತ್ಯೆಗೆ ಸಂಚು ರೂಪಿಸಿದ ಸೋಮ ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದರು. ರೋಹಿತ್ ಮತ್ತು ಆತನ ಸಹಚರರ ವಿಚಾರಣೆಯಲ್ಲಿ ಸತೀಶ್ ಹೆಸರು ಬಾಯಿಬಿಟ್ಟಿದ್ದರು. ಅಲ್ಲದೆ, ಇದೇ ಸತೀಶ್ ರೌಡಿ ಜೀತು, ಗಣೇಶ್ ಕೊಲೆಗೆ ಗೊಟ್ಟಿಗೆರೆ ಪರಮೇಶ್ ಗೂ ಕಂಟ್ರಿಮೇಡ್ ಪಿಸ್ತೂಲ್ ಕೊಟ್ಟಿದ್ದರು ಎಂಬುದು ಗೊತ್ತಾಗಿದೆ.

ಮತ್ತೊಂದೆಡೆ ಖಚಿತ ಮಾಹಿತಿ ಮೇರೆಗೆ ಇಸ್ರೋ ಲೇಔಟ್ ನ ಶಂಕರ್ ಎಂಬಾತನ ಮನೆ ಮೇಲೆ ದಾಳಿ ನಡೆಸಿದಾಗ ಸತೀಶ್ ಮಾರಾಟ ಮಾಡಿದ್ದ ಪಿಸ್ತೂಲ್ ಸಿಕ್ಕಿದೆ. ಈ ಮಾಹಿತಿ ಮೇರೆಗೆ ಹೈದರಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದ ಸತೀಶ್​ನನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸತೀಶ್ ಅಲಿಯಾಸ್ ಮಾರ್ಕೆಟ್ ಸತೀಶ್ ವಿರುದ್ಧ ಕಲಬುರಗಿಯಲ್ಲಿ ನಾಲ್ಕು ಕೊಲೆ ಸೇರಿ 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಈತ ಮತ್ತು ಈತನ ಸಹಚರರ ಉಪಟಳಕ್ಕೆ ಬ್ರೇಕ್ ಹಾಕಲು ಕಲಬುರಗಿ ಪೊಲೀಸರು ಸತೀಶ್ ಸಹಚರ ಕರಿ ಚಿರತೆ ಸೇರಿ ಇಬ್ಬರನ್ನು ಎನ್‌ಕೌಂಟರ್ ಮಾಡಿದ್ದರು.

ಈತ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ್ ಹಾಗೂ ಇತರೆಡೆಯಿಂದ ಕಂಟ್ರಿಮೇಡ್ ಪಿಸ್ತೂಲ್ ಗಳನ್ನು 10-15 ಸಾವಿರ ರೂ.ಗೆ ತರಿಸಿ ಕರ್ನಾಟಕದ ರೌಡಿಗಳಿಗೆ 80 ಸಾವಿರದಿಂದ 1 ಲಕ್ಷ ರೂ.ವರೆಗೆ ಮಾರಾಟ ಮಾಡುತ್ತಿದ್ದ. ಅದರಿಂದ ಕೋಟ್ಯಂತರ ರೂ. ಹಣಗಳಿಸಿದ್ದು, ಹೈದರಾಬಾದಿನಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ಐಷಾರಾಮಿ ಮನೆ ನಿರ್ಮಿಸಿದ್ದಾನೆ. ಕಲಬುರಗಿಯಲ್ಲಿಯೂ ಕೋಟ್ಯಂತರ ರೂ. ಮೌಲ್ಯದ ಮನೆ ನಿರ್ಮಿಸಿದ್ದು, ಹೊಸ ಕಾರುಗಳನ್ನು ಖರೀದಿಸಿದ್ದಾನೆ.

ಸದ್ಯ ಆರೋಪಿ ಸತೀಶ್ ಹಾಗೂ ಮತ್ತಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಯುತ್ತಿದೆ. ಇದುವರೆಗೂ 70ಕ್ಕೂ ಅಧಿಕ ಪಿಸ್ತೂಲುಗಳನ್ನು ಮಾರಾಟ ಮಾಡಿದ್ದಾನೆ ಎಂಬುದು ಪತ್ತೆಯಾಗಿದೆ. ರೌಡಿಗಳು ಮಾತ್ರವಲ್ಲದೆ, ಬೇರೆ ಯಾರಿಗೆಲ್ಲ ಪಿಸ್ತೂಲ್‌ಗಳನ್ನು ಮಾರಾಟ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.

CCB Police Arrested 3 country-made Pistol Illegal Dealers in Bengaluru.