ಮಾಸ್ಕ್ ಹಾಕದೇ ವಾಗ್ವಾದ ; ಬ್ಯಾಂಕಿಗೆ ಬಂದ ಯುವಕನಿಗೆ ಗುಂಡು ಹಾರಿಸಿದ ಸೆಕ್ಯುರಿಟಿ ಗಾರ್ಡ್

26-06-21 02:38 pm       Headline Karnataka News Network   ಕ್ರೈಂ

ಬ್ಯಾಂಕಿಗೆ ಆಗಮಿಸಿದ್ದ ಗ್ರಾಹಕನೊಬ್ಬ ಮಾಸ್ಕ್ ವಿಚಾರದಲ್ಲಿ ವಾಗ್ವಾದ ಮಾಡಿದ ಸಿಟ್ಟಿನಲ್ಲಿ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ತನ್ನ ಪಿಸ್ತೂಲಿನಲ್ಲಿ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಲಕ್ನೋ, ಜೂನ್ 26: ಬ್ಯಾಂಕಿಗೆ ಆಗಮಿಸಿದ್ದ ಗ್ರಾಹಕನೊಬ್ಬ ಮಾಸ್ಕ್ ವಿಚಾರದಲ್ಲಿ ವಾಗ್ವಾದ ಮಾಡಿದ ಸಿಟ್ಟಿನಲ್ಲಿ ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ತನ್ನ ಪಿಸ್ತೂಲಿನಲ್ಲಿ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಗ್ರಾಹಕ ರಕ್ತದೋಕುಳಿಯಲ್ಲಿ ಬಿದ್ದು ಹೊರಳಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

28 ವರ್ಷದ ರಾಜೇಶ್ ಕುಮಾರ್ ಎಂಬ ಯುವಕ ಶುಕ್ರವಾರ ಮಧ್ಯಾಹ್ನ ಬ್ಯಾಂಕಿಗೆ ಆಗಮಿಸಿದ್ದ. ಆದರೆ, ಮಾಸ್ಕ್ ಹಾಕದೇ ಇರುವ ಯಾರಿಗೂ ಪ್ರವೇಶ ನೀಡುವುದಿಲ್ಲ ಎಂದು ಹೇಳಿ ಸೆಕ್ಯುರಿಟಿ ಗಾರ್ಡ್ ಆತನನ್ನು ಹಿಂದಕ್ಕೆ ಕಳಿಸಿದ್ದ. ಬ್ಯಾಂಕ್ ಒಳಗೆ ಸಿಬಂದಿ ಮಾಸ್ಕ್ ಹಾಕಿಲ್ಲ. ನಾನ್ಯಾಕೆ ಹಾಕಬೇಕು ಎಂದು ಯುವಕ ವಾದ ಮಾಡಿ ಅಲ್ಲಿಂದ ತೆರಳಿದ್ದ. ಸ್ವಲ್ಪ ಹೊತ್ತಿನಲ್ಲಿ ರಾಜೇಶ್ ಮಾಸ್ಕ್ ಹಾಕ್ಕೊಂಡೇ ಬ್ಯಾಂಕಿಗೆ ಬಂದಿದ್ದಾನೆ. ಅಷ್ಟರಲ್ಲಿ ಮಧ್ಯಾಹ್ನ ಆಗಿದ್ದು, ಬ್ಯಾಂಕ್ ಸಿಬಂದಿ ಊಟಕ್ಕೆ ಹೋಗಿದ್ದಾರೆ. ಈಗ ಒಳಗೆ ಬಿಡಲು ಆಗುವುದಿಲ್ಲ ಎಂದು ಹೇಳಿ ಸೆಕ್ಯುರಿಟಿ ಗಾರ್ಡ್ ಮತ್ತೆ ವಾಪಸ್ ಕಳಿಸಿದ್ದಾನೆ.

ಇದರಿಂದ ಸಿಟ್ಟಾದ ರಾಜೇಶ್ ಮತ್ತು ಸೆಕ್ಯುರಿಟಿ ಗಾರ್ಡ್ ಮಧ್ಯೆ ವಾಗ್ವಾದ, ತಳ್ಳಾಟ ಆಗಿದೆ. ಇದರಿಂದ ಸಿಟ್ಟಿಗೆದ್ದ ಸೆಕ್ಯುರಿಟಿ ಗಾರ್ಡ್ ಕೇಶವ್, ತನ್ನ ಕೈಲಿದ್ದ ಗನ್ ಹಿಡಿದು ಗುಂಡು ಹಾರಿಸಿದ್ದಾನೆ. ರಾಜೇಶ್ ಕಾಲಿನ ತೊಡೆಯ ಭಾಗಕ್ಕೆ ಗುಂಡೇಟು ಬಿದ್ದಿದ್ದು, ನೆಲಕ್ಕೆ ಬಿದ್ದ ರಾಜೇಶ್ ರಕ್ತದೋಕುಳಿಯಲ್ಲಿ ಹೊರಳಾಡಿದ್ದಾನೆ. ಆನಂತರ ಅಲ್ಲಿಗೆ ರಾಜೇಶ್ ಕುಮಾರ್ ಪತ್ನಿ ಕೂಡ ಆಗಮಿಸಿದ್ದು, ಸೆಕ್ಯುರಿಟಿ ಗಾರ್ಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದ್ದು, ಪತ್ನಿಯ ಗೋಳಾಟದ ವಿಡಿಯೋ ವೈರಲ್ ಆಗಿದೆ.

ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಸೆಕ್ಯುರಿಟಿ ಗಾರ್ಡನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಿಚಾರಿಸಿದಾಗ, ಅಕಸ್ಮಾತ್ ಕೈತಪ್ಪಿ ಗುಂಡು ಹಾರಿತ್ತು. ಉದ್ದೇಶಪೂರ್ವಕ ಮಾಡಿದ್ದಲ್ಲ ಎಂದು ಹೇಳಿಕೆ ನೀಡಿದ್ದಾನೆ. ಆದರೆ, ಆತನ ವಿರುದ್ಧ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.

Security Guard Open Fire at Customer Who Trying To Enter Inside bank Without Mask Uttar Pradesh.