ರಾಮಕುಂಜ ; ಪೊಲೀಸ್ ಚೆಕ್ ಪೋಸ್ಟ್ ಕಿತ್ತು ಹಾಕಿ ಕಿಡಿಗೇಡಿಗಳ ದಾಂಧಲೆ, ಸಿಬಂದಿಗೆ ಹಲ್ಲೆ ಯತ್ನ

29-06-21 10:11 pm       Mangaluru Correspondent   ಕ್ರೈಂ

ಕಡಬ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಕುಂಜ ಬಳಿಯ ಆತೂರು ಎಂಬಲ್ಲಿ ಪೊಲೀಸ್ ಚೆಕ್ ಪೋಸ್ಟ್ ಹಾಕಿದ್ದನ್ನು ವಿರೋಧಿಸಿ ಗುಂಪೊಂದು ದಾಂಧಲೆ ನಡೆಸಿದ್ದು, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಪುತ್ತೂರು, ಜೂನ್ 29: ಕಡಬ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಕುಂಜ ಬಳಿಯ ಆತೂರು ಎಂಬಲ್ಲಿ ಪೊಲೀಸ್ ಚೆಕ್ ಪೋಸ್ಟ್ ಹಾಕಿದ್ದನ್ನು ವಿರೋಧಿಸಿ ಗುಂಪೊಂದು ದಾಂಧಲೆ ನಡೆಸಿದ್ದು, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.

ಆತೂರು ಚೆಕ್ ಪೋಸ್ಟಿನಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಕಡಬ ಎಸ್ಐ ಮತ್ತು ಸಿಬಂದಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ವೇಗವಾಗಿ ಬಂದ ಟಾಟಾ ಏಸ್ ವಾಹನ (ಕೆಎ 21ಬಿ 6482) ಚೆಕ್ ಪೋಸ್ಟ್ ನಲ್ಲಿ ರಸ್ತೆ ದಾಟುತ್ತಿದ್ದ ಹ್ಯಾರಿಸ್ ಎಂಬಾತನಿಗೆ ಡಿಕ್ಕಿಯಾಗಿ ಪರಾರಿಯಾಗಿದೆ. ಚೆಕ್ ಪೋಸ್ಟ್ ನಲ್ಲಿ ವಾಹನ ನಿಲ್ಲಿಸದೆ ಮುಂದೆ ಹೋಗಿದ್ದರಿಂದ ವಾಹನ ಪಾದಚಾರಿಗೆ ಡಿಕ್ಕಿಯಾಗಿತ್ತು. ಗಾಯಗೊಂಡ ಹ್ಯಾರೀಸ್ ನನ್ನು ಕೂಡಲೇ ಕಡಬ ಎಸ್ಐ ತಮ್ಮ ವಾಹನದಲ್ಲಿ ಉಪ್ಪಿನಂಗಡಿಯ ಆಸ್ಪತ್ರೆಗೆ ಒಯ್ದಿದ್ದರು.

ಆನಂತರ ಸ್ವಲ್ಪ ಹೊತ್ತಿನಲ್ಲಿ ಆತೂರು ಚೆಕ್ ಪೋಸ್ಟ್ ನಲ್ಲಿ 50-60 ಮಂದಿ ಸೇರಿದ್ದು, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರ ಪೈಕಿ 10-15 ಜನ ಕಿಡಿಗೇಡಿಗಳು ಅಲ್ಲಿದ್ದ ಪೊಲೀಸರನ್ನು ಉದ್ದೇಶಿಸಿ, ನಿಂದಿಸಿದ್ದಾರೆ. ಬಳಿಕ ಇಲ್ಲಿ ರಸ್ತೆಗೆ ಬ್ಯಾರಿಕೇಡ್ ಹಾಕಿ ತಪಾಸಣೆ ನಡೆಸಿದರೆ ನಮಗೆ ತೊಂದರೆಯಾಗುತ್ತದೆ. ಇಲ್ಲಿ ಯಾವುದೇ ಬ್ಯಾರಿಕೇಡ್ ಬೇಡ ಎಂದು ಅವುಗಳನ್ನು ಕಿತ್ತು ಹಾಕಿದ್ದಾರೆ.

ಅಲ್ಲದೆ, ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಜಿನ್ನಪ್ಪ ಮತ್ತು ಸಿಬಂದಿ ಹರೀಶ್ ಕುಮಾರ್ ಮೇಲೆ ಮೈಗೆ ಕೈಹಾಕಿ ದೂಡಿ ಹಲ್ಲೆಗೆ ಯತ್ನಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಪೊಲೀಸರು ನಿಲ್ಲುವುದಕ್ಕಾಗಿ ಸ್ಥಳೀಯ ಸಾರ್ವಜನಿಕರು ನಿರ್ಮಿಸಿಕೊಟ್ಟಿದ್ದ ಚೆಕ್ ಪೋಸ್ಟ್ ಶೆಡ್ ಅನ್ನು ಧ್ವಂಸ ಮಾಡಿದ್ದು ಅಲ್ಲಿದ್ದ ಮೂರು ಪ್ಲಾಸ್ಟಿಕ್ ಚೇರ್ ಗಳನ್ನೂ ಪುಡಿ ಮಾಡಿದ್ದಾರೆ. ಅಲ್ಲದೆ, ಇಲ್ಲಿ ಚೆಕ್ ಪೋಸ್ಟ್ ಹಾಕಿದರೆ ನಿಮ್ಮನ್ನು ಮತ್ತು ನಿಮ್ಮ ಇಲಾಖಾ ಸಿಬಂದಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆವಾಜ್ ಹಾಕಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಜಿನ್ನಪ್ಪ ಕಡಬ ಠಾಣೆಗೆ ದೂರು ನೀಡಿದ್ದು, 10ರಿಂದ 15 ಮಂದಿ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಮತ್ತು ದಾಂಧಲೆ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. 

Kadaba Dispute arises for placing Police Checkpost gang assaults Police personal .