200ಕ್ಕೂ ಹೆಚ್ಚು ಕಾರುಗಳನ್ನು ಕಳುವು ಮಾಡಿದ್ದ ಖದೀಮ ಕೊನೆಗೂ ಅಂದರ್

06-07-21 05:13 pm       Source: kannada.drivespark   ಕ್ರೈಂ

ಬಾಡಿಗೆ ನೀಡುವ ನೆಪದಲ್ಲಿ ಕಾರುಗಳನ್ನು ಪಡೆದು 200ಕ್ಕೂ ಹೆಚ್ಚು ಕಾರುಗಳನ್ನು ಕಳುವು ಮಾಡಿದ್ದ ಖದೀಮ ಕೊನೆಗೂ ಸೂರತ್ ಪೊಲೀಸರ ಅತಿಥಿಯಾಗಿದ್ದಾನೆ.

ಸೂರತ್, ಜುಲೈ 06: ದೇಶದಲ್ಲಿ ವಾಹನ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಬಾಡಿಗೆ ನೀಡುವ ನೆಪದಲ್ಲಿ ಕಾರುಗಳನ್ನು ಪಡೆದು 200ಕ್ಕೂ ಹೆಚ್ಚು ಕಾರುಗಳನ್ನು ಕಳುವು ಮಾಡಿದ್ದ ಖದೀಮ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.

ಸೂರತ್ ನಗರದ ಆರ್ಥಿಕ ಅಪರಾಧ ಘಟಕದ ಪೊಲೀಸರು ರೂ.4.5 ಕೋಟಿ ಮೌಲ್ಯದ 200 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಈವರೆಗೆ ಈ ಖದೀಮ 264 ಕಾರುಗಳನ್ನು ಕಳುವು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೂ 200 ಕಾರುಗಳನ್ನು ಮಾತ್ರ ವಶಪಡಿಸಿಕೊಂಡಿದ್ದಾರೆ. ಒಂದು ತಿಂಗಳೊಳಗೆ ಈ ಕಾರುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಕಳುವಾಗಿರುವ ಇತರ ಕಾರುಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಬಂಧಿತನನ್ನು ಕೇತುಲ್ ಪರ್ಮಾರ್ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಎರಡು ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೇತುಲ್ ಪರ್ಮಾರ್ ತಾನು ಕದ್ದ ಕಾರುಗಳನ್ನು ದೇಶದ ಹಲವು ರಾಜ್ಯಗಳಲ್ಲಿ ಮಾರಾಟ ಮಾಡಿದ್ದಾನೆ. ಆತನ ವಿರುದ್ದ ನಂಬಿಕೆ ದ್ರೋಹ, ಮೋಸ, ನಕಲಿ ದಾಖಲೆ ಸೃಷ್ಟಿಸುವಿಕೆ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ತಕ್ಷಣವೇ ಪೊಲೀಸರು ಕ್ರಮ ಕೈಗೊಂಡ ಕಾರಣಕ್ಕೆ ಹಲವು ಕಾರುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಕೇತುಲ್ ಪರ್ಮಾರ್ ತಾನು ಕದ್ದ ಕಾರುಗಳನ್ನು ಅವುಗಳ ನಿಜವಾದ ಬೆಲೆಗಿಂತ ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾನೆ. ಪೊಲೀಸರು ವಶಕ್ಕೆ ಪಡೆದಿರುವ ಕಾರುಗಳ ಪೈಕಿ 22 ಕಾರುಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿ ಉಳಿದ ಕಾರುಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲು ಪೊಲೀಸರು ನಿರ್ಧರಿಸಿದ್ದಾರೆ. ನ್ಯಾಯಾಲಯವು ಅನುಮತಿ ನೀಡಿದ ನಂತರ ಎಲ್ಲಾ ಕಾರುಗಳನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸಲಾಗುವುದು ಎಂದು ಸೂರತ್ ನಗರ ಪೊಲೀಸರು ತಿಳಿಸಿದ್ದಾರೆ.

ಭಥೇನಾ ನಿವಾಸಿಯಾದ ಅಮರ್ ಪಟೇಲ್ ಎಂಬುವವರು ಕಾರುಗಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 5ರಂದು ದೂರು ದಾಖಲಿಸಿದ್ದರು. ಪರ್ಮಾರ್ ಹಾಗೂ ಪಟೇಲ್ ಇಬ್ಬರೂ ಹಲವು ವರ್ಷಗಳಿಂದ ಕ್ಯಾಬ್ ಸೇವೆ ನೀಡುತ್ತಿದ್ದರು. ಕೆಲ ತಿಂಗಳುಗಳ ಹಿಂದೆ ಪಟೇಲ್ ಅವರನ್ನು ಭೇಟಿಯಾಗಿದ್ದ ಪರ್ಮಾರ್ ತನಗೆ ಕ್ಯಾಬ್'ಗಳನ್ನು ಒದಗಿಸಲು ಗುತ್ತಿಗೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಕೆಲವು ಕಾರುಗಳ ಅಗತ್ಯವಿದೆ ಎಂದು ತಿಳಿಸಿದ್ದ.

ಆತನ ಮಾತನ್ನು ನಂಬಿದ್ದ ಪಟೇಲ್ ತಮ್ಮ ಹಾಗೂ ತಮ್ಮ ಸ್ನೇಹಿತರ ಕಾರುಗಳನ್ನು ಪರ್ಮಾರ್'ಗೆ ನೀಡಿದ್ದರು. ಎಲ್ಲರಿಗೂ ಆರಂಭದಲ್ಲಿ ಕೆಲವು ತಿಂಗಳವರೆಗೆ ಪ್ರತಿ ತಿಂಗಳು ರೂ.20,000 ಬಾಡಿಗೆ ನೀಡಿದ್ದ. ನಂತರ ಬಾಡಿಗೆ ನೀಡುವುದನ್ನು ನಿಲ್ಲಿಸಿದ ಪರ್ಮಾರ್ ಕಾರುಗಳೊಂದಿಗೆ ಪರಾರಿಯಾಗಿದ್ದ. ಈಗ ಕೇತುಲ್ ಪರ್ಮಾರ್ ಮಾತ್ರ ಸಿಕ್ಕಿ ಬಿದ್ದಿದ್ದು ತಲೆ ಮರೆಸಿ ಕೊಂಡಿರುವ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

(Kannada Copy of Kannada Drivespark)

Surat’s Economic Offenses Cell (EOC) wing of the city police has recovered 200 cars worth Rs 4.5 crore. The vehicles were sold by a person who used to hire these vehicles as taxis. A total of 264 cars were stolen till now.