ಹಳೆಯಂಗಡಿ ; ದೇವಸ್ಥಾನಕ್ಕೆ ನುಗ್ಗಿದ ಕಳ್ಳರು, ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಕಳವು

13-07-21 02:19 pm       Mangalore Correspondent   ಕ್ರೈಂ

ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠದಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಸುರತ್ಕಲ್, ಜು.13 : ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠದಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ರಾತ್ರಿ ವಿಶ್ವಕರ್ಮ ಸಮುದಾಯದ ಹಳೆಯಂಗಡಿ ವಿನಾಯಕ ಮಠಕ್ಕೆ ನುಗ್ಗಿದ ಕಳ್ಳರು ಗರ್ಭಗುಡಿಯ ಬೀಗ ಮುರಿದು ದೇವಿಯ ಬೆಳ್ಳಿ ಪ್ರಭಾವಳಿ, ಬೆಳ್ಳಿಯ ಕವಚ, ಮೂಗುತಿ ಸೇರಿದಂತೆ ಚಿನ್ನ-ಬೆಳ್ಳಿಯ ಆಭರಣಗಳನ್ನು ಕಳವುಗೈದಿದ್ದಾರೆ. ಅದಲ್ಲದೆ ಗರ್ಭಗುಡಿಯ ಹೊರ ಬದಿಯಲ್ಲಿರುವ ಗಣಪತಿಯ ಗುಡಿಯ ಎರಡು ಬೀಗ ಒಡೆದು ಗಣಪತಿ ದೇವರ ಕವಚ, ಮತ್ತು ಪ್ರಭಾವಳಿ, ಚಿನ್ನದ ತಿಲಕ, ಕಾಣಿಕೆ ಡಬ್ಬಿ, ಶ್ರೀದೇವಿಯ ಗರ್ಭಗುಡಿ ಹೊರ ಬದಿಯ ಕಾಣಿಕೆ ಡಬ್ಬಿ ಬೀಗ ಒಡೆದು ಕಳ್ಳತನ ಮಾಡಿದ್ದಾರೆ.

ಸುಮಾರು ಏಳೂವರೆ ಕೆ.ಜಿ.ಯಷ್ಟು ಬೆಳ್ಳಿ ಹಾಗೂ 9 ಗ್ರಾಂನಷ್ಟು ಚಿನ್ನದ ಸೊತ್ತು ಹಾಗೂ ಕಾಣಿಕೆ ಡಬ್ಬಿಯಲ್ಲಿದ್ದ ನಗದು ಸೇರಿದಂತೆ ಸುಮಾರು 6 ಲಕ್ಷ ರೂ. ವರೆಗಿನ ಸೊತ್ತು ಕಳವಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಇಂದು ಬೆಳಗ್ಗೆ ಅರ್ಚಕರು ಪೂಜೆಗೆಂದು ದೇವಳದ ಬಾಗಿಲು ತೆರೆದಾಗ ಕೃತ್ಯ ಬೆಳಕಿಗೆ ಬಂದಿದೆ. ಕಳ್ಳರು ಮಠದ ಹೊರ ಬದಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಮೇಲಿನಿಂದ ಮಠದ ಒಳಗಡೆ ಬಂದಿರಬಹುದು ಎಂದು  ಶಂಕಿಸಲಾಗಿದೆ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thieves steal lakhs worth of Gold Monuments from Temple in Haleyangadi. Mulki police are now investigating the case.