ಆಂಬುಲೆನ್ಸ್ ಸಾಗುವುದಕ್ಕೆ ಅಡ್ಡಿಪಡಿಸಿದ ಕಾರು ಚಾಲಕ ಪೊಲೀಸ್ ವಶಕ್ಕೆ

20-07-21 02:44 pm       Mangalore Correspondent   ಕ್ರೈಂ

ಆಂಬುಲೆನ್ಸ್ ವಾಹನ ಸಾಗುತ್ತಿದ್ದಾಗ ಅಡ್ಡಾದಿಡ್ಡಿ ಕಾರು ಚಲಾಯಿಸಿ, ತುರ್ತು ಅಗತ್ಯದ ರೋಗಿಯ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕಾರು ಚಾಲಕ ಮತ್ತು ವಾಹನವನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಜುಲೈ 20: ಆಂಬುಲೆನ್ಸ್ ವಾಹನ ಸಾಗುತ್ತಿದ್ದಾಗ ಅಡ್ಡಾದಿಡ್ಡಿ ಕಾರು ಚಲಾಯಿಸಿ, ತುರ್ತು ಅಗತ್ಯದ ರೋಗಿಯ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕಾರು ಚಾಲಕ ಮತ್ತು ವಾಹನವನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಉಳ್ಳಾಲದ ಕುಂಪಲ ನಿವಾಸಿ ಚರಣ್ ರಾಜ್ ಎಸ್. (31) ಎಂದು ಗುರುತಿಸಲಾಗಿದೆ.

ನಿನ್ನೆ ಸಂಜೆ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಿಂದ ಮಂಗಳೂರಿನ ನಗರದ ಆಸ್ಪತ್ರೆಗೆ ತುರ್ತು ಅಗತ್ಯದ ರೋಗಿಯನ್ನು ಆಂಬುಲೆನ್ಸ್ ನಲ್ಲಿ ತರುತ್ತಿದ್ದಾಗ ದೇರಳಕಟ್ಟೆಯಿಂದ ತೊಕ್ಕೊಟ್ಟು ಹೆದ್ದಾರಿ ಮೂಲಕ ಮಂಗಳೂರಿನ ಎಕ್ಕೂರು ವರೆಗೂ ಕಾರು ಚಾಲಕ ಸಂಚಾರಕ್ಕೆ ಅಡ್ಡಿಪಡಿಸಿದ್ದು ವಿಡಿಯೋದಲ್ಲಿ ದಾಖಲಾಗಿತ್ತು. ಆಂಬುಲೆನ್ಸ್ ನಲ್ಲಿದ್ದವರೇ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು, ಕಾರಿನ ನಂಬರ್ (ಕೆಎ 19 ಎಂಜೆ 8924) ಸ್ಪಷ್ಟವಾಗಿ ದಾಖಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಂಗಳೂರು ನಗರ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಕ್ರಮ ಜರುಗಿಸಿದ್ದಾರೆ.

ಅಡ್ಡಾದಿಡ್ಡಿ ಚಲಾಯಿಸಿದ್ದ ಎರ್ಟಿಕಾ ಕಾರನ್ನು ವಶಕ್ಕೆ ಪಡೆದು, ಕಂಕನಾಡಿ ನಗರ ಸಂಚಾರಿ ಠಾಣೆಗೆ ತಂದಿರಿಸಿದ್ದಾರೆ. ಆರೋಪಿ ಚಾಲಕ ಚರಣ್ ರಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕಮಿಷನರ್ ಶಶಿಕುಮಾರ್, ಯಾವುದೇ ತುರ್ತು ಸೇವಾ ವಾಹನಗಳು ಸೈರನ್ ಹೊಡೆದು ಸಂಚರಿಸುತ್ತಿರುವ ವೇಳೆ ಸದರಿ ವಾಹನವನ್ನು ಹಿಂಬಾಲಿಸಿದಲ್ಲಿ ಅಥವಾ ಸಂಚಾರಕ್ಕೆ ಅಡ್ಡಿಪಡಿಸಿದಲ್ಲಿ ದಂಡ ಅಥವಾ ಆರು ತಿಂಗಳು ಶಿಕ್ಷೆ ವಿಧಿಸಬಹುದು. ಗಂಭೀರ ಅಪರಾಧ ಆಗಿದ್ದಲ್ಲಿ ಎರಡನ್ನೂ ವಿಧಿಸಲು ಅವಕಾಶ ಇರುತ್ತದೆ. ಹಾಗಾಗಿ ಸದ್ರಿ ಪ್ರಕರಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಆತ ಡ್ರಿಂಕ್ಸ್ ಮಾಡಿ, ಈ ರೀತಿ ಅಪರಾಧ ಎಸಗಿದ್ದಾನೆಯೇ ಅನ್ನುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. 

Video: 

The driver of a Maruti Ertiga car bearing registration No. KA19 MJ8924 was detained, his car was seized, and a fine was imposed. He had blocked the path of an ambulance on NH 66 stretch of Thokkottu to Pumpwell, by which a patient who was facing an emergency was being taken from Kanachur hospital to another hospital in the city. The incident had happened on the evening of Monday July 19 and the video clip of the same had gone viral on social media.