ಸುಳ್ಳು ಹೇಳಿ ಎಸ್ಸಿ ಮೀಸಲು ಹುದ್ದೆ ಪಡೆದಿದ್ದ ಬ್ರಾಹ್ಮಣ ವ್ಯಕ್ತಿ ! ಕುವೆಂಪು ವಿವಿಯ ರಿಜಿಸ್ಟ್ರಾರ್ ಹುದ್ದೆಯಿಂದ ವಜಾ !! 

31-07-21 01:59 pm       Headline Karnataka News Network   ಕ್ರೈಂ

ಪರಿಶಿಷ್ಟ ಜಾತಿ ಹೆಸರಲ್ಲಿ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಕುವೆಂಪು ವಿವಿಯಲ್ಲಿ ಉಪ ಕುಲಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದ ಅಧಿಕಾರಿಯನ್ನು ಸೇವೆಯಿಂದಲೇ ವಜಾಗೊಳಿಸಿದ ಪ್ರಕರಣ ನಡೆದಿದೆ.‌

ಶಿವಮೊಗ್ಗ, ಜುಲೈ 31: ಪರಿಶಿಷ್ಟ ಜಾತಿ ಹೆಸರಲ್ಲಿ ನಕಲಿ ಪ್ರಮಾಣ ಪತ್ರ ಸಲ್ಲಿಸಿ ಕುವೆಂಪು ವಿವಿಯಲ್ಲಿ ಉಪ ಕುಲಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದ ಅಧಿಕಾರಿಯನ್ನು ಸೇವೆಯಿಂದಲೇ ವಜಾಗೊಳಿಸಿದ ಪ್ರಕರಣ ನಡೆದಿದೆ.‌

 ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಉಪ ಕುಲಸಚಿವರಾಗಿದ್ದ ಉಡುಪಿ ಮೂಲದ ಸೀತಾರಾಮ್ ಸೇವೆಯಿಂದಲೇ ವಜಾಗೊಂಡ ಅಧಿಕಾರಿ. ಮಾಲೇರ ಜಾತಿ ಪ್ರಮಾಣ ಪತ್ರ ಪಡೆದು ಸೀತಾರಾಮ್ ಕೆಲಸ ಗಿಟ್ಟಿಸಿಕೊಂಡಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ.‌ 

ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ ಗ್ರಾಮದ ನಿವಾಸಿಯಾಗಿರುವ ಸೀತಾರಾಮ್, ಬ್ರಾಹ್ಮಣ ಜಾತಿಗೆ ಸೇರಿದವರು ಎನ್ನಲಾಗಿದೆ. ಆದರೆ ಸುಳ್ಳು ಹೇಳಿ 1989ರಲ್ಲಿ ಕುವೆಂಪು ವಿವಿಯಲ್ಲಿ ಎಸ್ಟಿಗೆ ಮೀಸಲಾಗಿದ್ದ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದರು. 

ಮೀಸಲಾತಿಯಡಿ ಬಡ್ತಿ ಪಡೆದು ಇದೀಗ ಉಪ ಕುಲಸಚಿವರ ಸ್ಥಾನಕ್ಕೆ ಏರಿದ್ದರು.‌ ಈ ಬಗ್ಗೆ ಮಾಹಿತಿ ಪಡೆದ ಶಿವಮೊಗ್ಗದ ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಎಂಬ ಸಂಘಟನೆಯ ಸಿ.ಎಂ.ಕೃಷ್ಣ ಎಂಬವರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ತನಿಖೆಗೆ ಒಳಪಡಿಸಿ ನಕಲಿ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಆದೇಶ ಮಾಡಿದ್ದರು. ಜಿಲ್ಲಾಧಿಕಾರಿ ಆದೇಶದಿಂದಾಗಿ ಸೀತಾರಾಮ್ ಅವರನ್ನು ಕುವೆಂಪು ವಿವಿಯ ಆಡಳಿತ ಸೇವೆಯಿಂದ ವಜಾಗೊಳಿಸಿದೆ.‌

Shivamogga Kuvempu University Registrar suspended over fake caste row. The Suspended registrar is Sitaram from Udupi.