ಸಿಡಿ ಭಯದಲ್ಲಿರುವ ಶಾಸಕರಿಗಿಲ್ಲ ಸಚಿವ ಸ್ಥಾನ ; ಹೈಕಮಾಂಡ್ ಒತ್ತಡಕ್ಕೆ ಬೇಸ್ತು ಬಿದ್ದ ವಲಸಿಗರು !

31-07-21 10:19 pm       Mangaluru Correspondent   ಕ್ರೈಂ

ಸಿಎಂ ಬಸವರಾಜ್ ಬೊಮ್ಮಾಯಿ ಸರಕಾರದಲ್ಲಿ ಸಚಿವರಾಗುವ ಮಂದಿ ಕಳಂಕ ರಹಿತರು ಆಗಿರಬೇಕೆಂದು ಆರೆಸ್ಸೆಸ್ ಹೊಸ ಡಿಮ್ಯಾಂಡ್ ಇಟ್ಟಿದೆ.

ಬೆಂಗಳೂರು, ಜುಲೈ 31: ಸಿಎಂ ಬಸವರಾಜ್ ಬೊಮ್ಮಾಯಿ ಸರಕಾರದಲ್ಲಿ ಸಚಿವರಾಗುವ ಮಂದಿ ಕಳಂಕ ರಹಿತರು ಆಗಿರಬೇಕೆಂದು ಆರೆಸ್ಸೆಸ್ ಹೊಸ ಡಿಮ್ಯಾಂಡ್ ಇಟ್ಟಿದೆ. ಅದರಂತೆ, ಸಿಡಿ ಭಯದಿಂದ ಕೋರ್ಟಿಗೆ ಹೋಗಿರುವ ಶಾಸಕರು ಮತ್ತು ಕಳೆದ ಬಾರಿ ಸಚಿವರಾಗಿದ್ದ ಕೆಲವು ಮಂದಿಗೆ ಸಚಿವ ಸ್ಥಾನ ನೀಡಬಾರದೆಂದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದ್ದಾಗಿ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಈ ರೀತಿಯ ವದಂತಿ ಹರಡಿದ್ದರೂ, ಕಳಂಕಿತ ಸಚಿವರನ್ನು ಬಿಟ್ಟು ಸಚಿವ ಸಂಪುಟ ಮಾಡುವುದು ಬಿಜೆಪಿಗೆ ಅಷ್ಟೇ ಕಷ್ಟವೂ ಆಗಲಿದೆ.

ಕಳೆದ ಬಾರಿ ಪ್ರಭಾವಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಸಿಡಿ ಹೊರಬಂದು ರಾಜಕೀಯದಲ್ಲಿ ಭಾರೀ ರಾಡಿ ಎಬ್ಬಿಸಿತ್ತು. ಅದರ ಬೆನ್ನಲ್ಲೇ ಹಲವು ಸಚಿವರು ಮತ್ತು ಕೆಲವು ಶಾಸಕರು ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗದಂತೆ ಕೋರ್ಟ್ ಮೂಲಕ ತಡೆಯಾಜ್ಞೆ ತಂದಿದ್ದರು. ಶಾಸಕರು, ಸಚಿವರು ಈ ರೀತಿ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಬಿಜೆಪಿಗೆ ಇರಿಸು ಮುರಿಸು ಮಾಡಿತ್ತು. ರಾಷ್ಟ್ರ ಮಟ್ಟದಲ್ಲಿಯೂ ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು.

ಇದೀಗ ಅಂಥ ಕಳಂಕಿತರು ಯಾರಿದ್ದಾರೆ, ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡಬಾರದೆಂದು ಆರೆಸ್ಸೆಸ್ ನಾಯಕರು ಕೂಡ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಕಳೆದ ಬಾರಿ ಬಿಜೆಪಿ ಸೇರಿದ್ದ ಬಹುತೇಕ ವಲಸಿಗ ಶಾಸಕರು ತಮ್ಮ ವಿರುದ್ಧ ಮಾಧ್ಯಮದಲ್ಲಿ ಸುದ್ದಿ ಪ್ರಕಟಿಸಬಾರದೆಂದು ಸ್ಟೇ ತಂದಿದ್ದರು. ಅವರನ್ನು ಹೊರತುಪಡಿಸಿ ಬಿಜೆಪಿ ಸರಕಾರದಲ್ಲಿ ಸಂಪುಟ ರಚನೆ ಮಾಡುವುದು ಕಷ್ಟ ಎನ್ನಲಾಗುತ್ತಿದ್ದರೂ, ಹೈಕಮಾಂಡ್ ಮತ್ತು ಆರೆಸ್ಸೆಸ್ ನಾಯಕರ ಸೂಚನೆಯಿಂದಾಗಿ ಸಿಎಂ ಬೊಮ್ಮಾಯಿ ಸಂಕಟದಲ್ಲಿ ಬಿದ್ದಂತಾಗಿದೆ.

ಈ ನಡುವೆ, ಹೊನ್ನಾಳಿ ಶಾಸಕ ಮತ್ತು ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಎಂ.ಪಿ. ರೇಣುಕಾಚಾರ್ಯ ಕೂಡ ಕೋರ್ಟ್ ಸ್ಟೇ ತಂದಿದ್ದು, ತಮ್ಮ ವಿರುದ್ಧ ನಿಂದನಾತ್ಮಕ ಸುದ್ದಿಗಳನ್ನು ಬಿತ್ತರಿಸದಂತೆ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ತಂದಿದ್ದಾರೆ. ಆರೆಸ್ಸೆಸ್ ನಾಯಕರ ಈ ರೀತಿಯ ನಿರ್ಧಾರ ರೇಣುಕಾಚಾರ್ಯ ಕೂಡ ಸಚಿವ ಸ್ಥಾನಕ್ಕೇರದಂತೆ ಬ್ರೇಕ್ ನೀಡಿದಂತಾಗಿದೆ. 

Karnataka cabinet expansion CD Fallout 6 Karnataka Ministers Move Seeking Restraint on Defamatory Content