ಕುವೈಟ್, ದುಬೈನಲ್ಲಿ ಉದ್ಯೋಗ ಇದೆಯೆಂದು ಹೇಳಿ ಲಕ್ಷ ಲಕ್ಷ ಪಡೆದು ಮೋಸ ; ನಕಲಿ ಏಜನ್ಸಿಗಳ ಬಗ್ಗೆ ಎಚ್ಚರ !

07-08-21 01:13 pm       Headline Karnataka News Network   ಕ್ರೈಂ

ಕೆಲವು ನಕಲಿ ಏಜನ್ಸಿಗಳು ಕುವೈಟಿನಲ್ಲಿ ಉದ್ಯೋಗ, ದುಬೈನಲ್ಲಿ ಉದ್ಯೋಗ ಇದೆಯೆಂದು ಹೇಳಿ ಜಾಹೀರಾತು ನೀಡುತ್ತಿದ್ದು, ಅಮಾಯಕರನ್ನು ವಂಚಿಸಲು ಮತ್ತೆ ತಯಾರಾಗಿವೆ.

ಮಂಗಳೂರು, ಆಗಸ್ಟ್ 7: ವಿದೇಶದಲ್ಲಿ ಉದ್ಯೋಗ ಇದೆಯೆಂದು ಯಾಮಾರಿಸುವುದು, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುವುದು ಮುಂಬೈ, ಮಂಗಳೂರಿನಲ್ಲಿ ಮಾಮೂಲಿಯೋ ಎನ್ನುವಂತಾಗಿದೆ. ಕಳೆದೊಂದು ವರ್ಷದಲ್ಲಿ ಕೊರೊನಾ ಲಾಕ್ಡೌನ್ ಕಾರಣದಿಂದ ಗಲ್ಫ್ ರಾಷ್ಟ್ರಗಳಲ್ಲಿ ಬಹುತೇಕರು ಕೆಲಸ ಕಳೆದುಕೊಂಡು ಊರಿಗೆ ಮರಳಿದ್ದಾರೆ. ಆದರೆ, ಇಂಥ ಸಮಯದಲ್ಲೇ ಕೆಲವು ನಕಲಿ ಏಜನ್ಸಿಗಳು ಕುವೈಟಿನಲ್ಲಿ ಉದ್ಯೋಗ, ದುಬೈನಲ್ಲಿ ಉದ್ಯೋಗ ಇದೆಯೆಂದು ಹೇಳಿ ಜಾಹೀರಾತು ನೀಡುತ್ತಿದ್ದು, ಅಮಾಯಕರನ್ನು ವಂಚಿಸಲು ಮತ್ತೆ ತಯಾರಾಗಿವೆ.

ಸದ್ಯಕ್ಕೆ ಕುವೈಟ್ ರಾಷ್ಟ್ರಕ್ಕಾಗಲೀ, ಇನ್ನಿತರ ಮುಂದುವರಿದ ರಾಷ್ಟ್ರಕ್ಕಾಗಲೀ ನೇರ ವಿಮಾನ ಸಂಪರ್ಕವೇ ಇಲ್ಲ. ಕುವೈಟಿನಲ್ಲೇ ನೆಲಸಿದ್ದರೂ, ಭಾರತಕ್ಕೆ ಬಂದವರು ಹಿಂತಿರುಗಿ ಹೋಗಬೇಕಿದ್ದಲ್ಲಿ ದುಬೈ ಮೂಲಕ ಕುವೈಟ್ ಹೋಗಬೇಕಿದೆ. ಆದರೆ, ಇಂಥ ಸಮಯದಲ್ಲಿ ಕುವೈಟಿನಲ್ಲಿ ಕೆಲಸ ಇದೆಯೆಂದು ಹೇಳಿ ವಾಟ್ಸಪ್ ಜಾಲತಾಣದಲ್ಲಿ ಹರಿಯ ಬಿಡುತ್ತಿರುವುದು ಕಂಡುಬಂದಿದೆ.  ಆಮೂಲಕ ಅಮಾಯಕರನ್ನು ಮತ್ತೆ ಬಲೆಗೆ ಬೀಳಿಸಲು ಏಜನ್ಸಿಗಳು ತಂತ್ರ ಹೆಣೆಯುತ್ತಿದ್ದಾರೆಯೇ ಅನ್ನುವ ಅನುಮಾನ ಎದ್ದಿದೆ.

ಒಂದು ವರ್ಷದ ಹಿಂದೆ ಮಂಗಳೂರಿನಿಂದ ಮಾಣಿಕ್ಯ ಅಸೋಸಿಯೇಟ್ಸ್ ಮೂಲಕ ದುಬೈನಲ್ಲಿ ಉದ್ಯೋಗ ಇದೆಯೆಂದು 34 ಮಂದಿಯನ್ನು ಕಳುಹಿಸಲಾಗಿತ್ತು. ಬಳಿಕ ಅಲ್ಲಿ ಉದ್ಯೋಗವೂ ಸಿಗದೆ, ಅಲ್ಲಿ ತೆರಳಿದವರಿಗೆ ಕೊನೆಗೆ ಊಟಕ್ಕೂ ಗತಿಯಿಲ್ಲದ ಸ್ಥಿತಿ ಎದುರಾಗಿತ್ತು. ಆನಂತರ ಕುವೈಟ್ ಉದ್ಯಮಿ ಮೋಹನದಾಸ್ ಕಾಮತ್, ರಾಜ್ ಭಂಡಾರಿ ಇನ್ನಿತರರು ನೆರವಿಗೆ ಬಂದಿದ್ದರು. ಅಲ್ಲಿ ಸಿಕ್ಕಿಬಿದ್ದವರು ವಿಡಿಯೋ ಮಾಡಿ, ತಮ್ಮನ್ನು ರಕ್ಷಣೆ ಮಾಡುವಂತೆ ಕೋರಿದ್ದರಿಂದ ವೇದವ್ಯಾಸ ಕಾಮತ್ ವಿಮಾನದ ಟಿಕೆಟ್ ಮಾಡಿಕೊಟ್ಟು ನೆರವಾಗಿದ್ದರು. ಅಲ್ಲಿಂದ ಹಿಂತಿರುಗಿ ಬಂದ ಬಳಿಕ ಮಾಣಿಕ್ಯ ಅಸೋಸಿಯೇಟ್ಸ್ ಎನ್ನುವ ಏಜನ್ಸಿಗೆ ಒಬ್ಬೊಬ್ಬರು ಒಂದೊಂದು ಲಕ್ಷದ ವರೆಗೂ ಹಣವನ್ನು ನೀಡಿದ್ದರು ಎನ್ನುವ ದೂರು ಕೇಳಿಬಂದಿತ್ತು. ಈ ಬಗ್ಗೆ ಬಂದರು ಠಾಣೆಯಲ್ಲಿ ಅಸೋಸಿಯೇಟ್ಸ್ ಮಾಲಕ ಪ್ರಸಾದ್ ಶೆಟ್ಟಿ ವಿರುದ್ಧ ಕೇಸು ದಾಖಲಾಗಿತ್ತು. ಆದರೆ, ಪ್ರಕರಣ ದಾಖಲಾಗಿದ್ದು ಬಿಟ್ಟರೆ ಹಣ ಕಳಕೊಂಡು ಬೀದಿಗೆ ಬಿದ್ದವರಿಗೆ ನ್ಯಾಯ ಸಿಕ್ಕಿಲ್ಲ.

ವಂಚನೆಗೊಳಗಾದವರು ನಕಲಿ ಏಜನ್ಸಿಯ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೋಗರೆದಿದ್ದೇ ಬಂತು. ಒಂದು ತಿಂಗಳ ಹಿಂದೆ ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಅವರನ್ನು ಭೇಟಿಯಾಗಿದ್ದ ವಂಚನೆಗೊಳಗಾದ ಮಂದಿ, ಪ್ರಸಾದ್ ಶೆಟ್ಟಿ ಮತ್ತು ಆತನ ಏಜನ್ಸಿ ವಿರುದ್ಧ ಕ್ರಮ ಜರುಗಿಸುವಂತೆ ಹೇಳಿದ್ದರು. ಹಿಂದೆ ಪ್ರಕರಣ ದಾಖಲಾಗಿದ್ದ ವೇಳೆ ಆರೋಪಿಯನ್ನು ವಶಕ್ಕೆ ಪಡೆದು ಆನಂತರ ಪೊಲೀಸರು ಬಿಡುಗಡೆ ಮಾಡಿದ್ದರು. ಇಂಥ ನಿದರ್ಶನ ಇದ್ದಾಗಿಯೂ ಈಗ ಅದೇ ಮಾದರಿಯ ನಕಲಿ ಏಜನ್ಸಿಗಳು ಉದ್ಯೋಗದ ಹೆಸರಲ್ಲಿ ಯುವಕರನ್ನು ಯಾಮಾರಿಸುವ ಕೆಲಸ ಮಾಡುತ್ತಿವೆ.

ವಾಟ್ಸಪ್ ಜಾಲತಾಣದಲ್ಲಿ ಉದ್ಯೋಗ ಇದೆಯೆಂದು ಬಿಂಬಿಸಿ, ತಮ್ಮ ಕಚೇರಿಯ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ನಮೂದಿಸಿ ಹರಿಯಬಿಡುತ್ತಿದ್ದಾರೆ. ಪಾಸ್ ಪೋರ್ಟ್ ಎಲ್ಲವನ್ನೂ ರೆಡಿ ಮಾಡಿಟ್ಟುಕೊಂಡು ಅಲ್ಲಿಗೆ ಹೋದರೆ, ಪಾಸ್ ಪೋರ್ಟ್ ಪಡೆದು ಬಳಿಕ ಅದನ್ನೇ ನೆಪವಾಗಿಟ್ಟು ಹಣ ಪೀಕಿಸುತ್ತಾರೆ ಎಂದು ವಂಚನೆಗೆ ಒಳಗಾದ ಮಂದಿ ದೂರು ಹೇಳಿಕೊಂಡಿದ್ದಾರೆ. ಕಳೆದ ಬಾರಿ ಲಕ್ಷಾಂತರ ರೂಪಾಯಿ ಹಣ ಕಳಕೊಂಡವರೇ ಈಗ ಮತ್ತೆ ಅದೇ ರೀತಿಯ ಜಾಲ ಸಕ್ರಿಯವಾಗಿರುವ ಬಗ್ಗೆ ಎಚ್ಚರಿಸುತ್ತಿದ್ದಾರೆ.

ನಕಲಿ ಏಜನ್ಸಿಯಿಂದ ಭಾರೀ ವಂಚನೆ

ಮಾಣಿಕ್ಯ ಅಸೋಸಿಯೇಟ್ಸ್ ಮೂಲಕ ಮಂಗಳೂರಿನ 34 ಮಂದಿ ಅಲ್ಲದೆ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಭಾರತದವರೂ ಇದ್ದರು. ಒಟ್ಟು 72 ಮಂದಿ ದುಬೈಗೆ ಹೋಗಿದ್ದೆವು. ಅಲ್ಲಿ ಹೋದ ಮೇಲೆ, ನಮ್ಮನ್ನು ರಿಸೀವ್ ಮಾಡೋರೂ ಇರಲಿಲ್ಲ. ಯಾರೋ ಬಂದು ಒಂದ್ಕಡೆ ಒಯ್ದು ಕೂಡಿಹಾಕಿದ್ದರು. ಕೆಲಸದ ಬಗ್ಗೆ ಕೇಳಿದಾಗ, ಏನೂ ಸ್ಪಂದನೆ ಮಾಡಿರಲಿಲ್ಲ. ಚಾಲಕ ಹುದ್ದೆ ಇದೆಯೆಂದು ಕಳಿಸಲಾಗಿತ್ತು. ಬಳಿಕ ಕೆಲವರು ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಸಂಬಳವೂ ಸಿಗದೆ, ತೊಂದರೆಗೀಡಾಗಿದ್ದರು. ಆನಂತರ ಮೂರು ತಿಂಗಳು ಅಲ್ಲಿದ್ದು ಹೇಗೋ ಮರಳಿ ಬಂದು, ಪೊಲೀಸ್ ದೂರು ಕೊಟ್ಟಿದ್ದೆವು ಎಂದು ಸ್ಮರಿಸುತ್ತಾರೆ, ಬಂಟ್ವಾಳದ ಇರ್ಫಾನ್ ಮತ್ತು ಮಂಜೇಶ್ವರದ ಅಭಿಷೇಕ್.

ಬೋಗಸ್ ಕಂಪನಿ ನಂಬಿ ಮೋಸ ಹೋಗದಿರಿ

ಈ ಬಗ್ಗೆ ಎನ್ನಾರೈ ಉದ್ಯೋಗಿ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ. ಕುವೈಟಿನಲ್ಲಿ ಕೋವಿಡ್ ಕಾರಣದಿಂದ ಯಾವುದೇ ಉದ್ಯೋಗವಾಕಾಶ ಇಲ್ಲ. ಕುವೈಟಿಗೆ ಭಾರತದಿಂದ ವಿಮಾನ ಬರುವುದಕ್ಕೇ ಬಿಟ್ಟಿಲ್ಲ. ಇನ್ನು ಹೊಸ ಉದ್ಯೋಗಸ್ಥರು ಹೇಗೆ ಬರುವುದು. ಇವೆಲ್ಲ ಬೋಗಸ್, ನಕಲಿ ಏಜನ್ಸಿಗಳ ಜಾಲ. ಇಂಥವನ್ನು ನಂಬಿ ಮೋಸ ಹೋಗಬೇಡಿ ಎಂದು ಹೇಳಿದ್ದಾರೆ. 

Mangalore Fake Jobs offers circulate on social media for arab countries. Forum members request travellers or job seekers not to fall prey.