ರಾಜಧಾನಿ ಜುವೆಲ್ಲರಿ ದರೋಡೆ ; ಮತ್ತೊಬ್ಬ ಆರೋಪಿ ಕಾರ್ಕಳದಲ್ಲಿ ಸೆರೆ

10-08-21 11:22 pm       Mangaluru Correspondent   ಕ್ರೈಂ

ಹೊಸಂಗಡಿಯ ರಾಜಧಾನಿ ಜುವೆಲ್ಲರಿ ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರ, ಆಗಸ್ಟ್ 10: ಹೊಸಂಗಡಿಯ ರಾಜಧಾನಿ ಜುವೆಲ್ಲರಿ ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾರ್ಕಳ ತಾಲೂಕಿನ ಹೊಸ್ಮಾರು ನಿವಾಸಿ ಮಹಮ್ಮದ್ ರಿಯಾಜ್ (32) ಎಂದು ಗುರುತಿಸಲಾಗಿದೆ.

ಆರೋಪಿಯನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ಮತ್ತು ಮಂಜೇಶ್ವರ ಇನ್ ಸ್ಪೆಕ್ಟರ್ ಸಂತೋಷ್ ಕುಮಾರ್ ಅವರ ತಂಡ ಚಿಕ್ಕಮಗಳೂರಿನ ಕುದ್ರೆಮುಖ ಬೆಟ್ಟಗಳ ಬಳಿಯಲ್ಲಿ ಪತ್ತೆ ಮಾಡಿ ಬಂಧಿಸಿದೆ.

ಇತ್ತೀಚೆಗೆ ಕಾಸರಗೋಡು ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯಾದ ತೃಶ್ಶೂರು ಮೂಲದ ಕೊಡುಂಗಲ್ಲೂರು ನಿವಾಸಿ ಸತ್ಯೇಶ್ ಕೆಪಿ ಅಲಿಯಾಸ್ ಕಿರಣ್ (35) ಎಂಬಾತನನ್ನು ಬಂಧಿಸಿದ್ದರು. ಈತನ ಜೊತೆಗಿದ್ದ ಇತರ ಐವರು ಸೇರಿ ಡಕಾಯಿತಿ ನಡೆಸಿದ್ದರು ಎನ್ನಲಾಗಿತ್ತು.

ಜುಲೈ 26ರಂದು ರಾತ್ರಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಅಬ್ದುಲ್ಲಾ ಎಂಬಾತನನ್ನು ಕಟ್ಟಿ ಹಾಕಿ, ಗೋಣಿಚೀಲದಲ್ಲಿ ತುಂಬಿಸಿಟ್ಟು ಜುವೆಲ್ಲರಿ ದರೋಡೆ ನಡೆಸಿದ್ದರು. ಹೊರಗಡೆ ಭಾರೀ ಮಳೆ ಇದ್ದುದರಿಂದ ಹೊಸಂಗಡಿ ಜಂಕ್ಷನ್ನಲ್ಲಿ ರಸ್ತೆ ಬದಿಯಲ್ಲೇ ಇರುವ ಜುವೆಲ್ಲರಿಯಲ್ಲಿ ದರೋಡೆ ನಡೆದಿದ್ದು ಯಾರಿಗೂ ಅರಿವಿಗೆ ಬಂದಿರಲಿಲ್ಲ. 15 ಕೇಜಿ ಬೆಳ್ಳಿ ಆಭರಣಗಳು ಮತ್ತು ನಾಲ್ಕು ಲಕ್ಷ ರೂಪಾಯಿ ನಗದು ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು. ಅದೇ ದಿನ ನಸುಕಿನಲ್ಲಿ ಇನ್ನೋವಾ ಕಾರಿನಲ್ಲಿ ಒಂದು ತಂಡ ಹಿಂತಿರುಗುತ್ತಿದ್ದಾಗ ಉಳ್ಳಾಲದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದರು. ಬಳಿಕ ಕಾರು ಬಿಟ್ಟು ಏಳು ಜನರಿದ್ದ ತಂಡ ಪರಾರಿಯಾಗಿತ್ತು. ಕಾರಿನಲ್ಲಿ ಏಳು ಕೇಜಿ ಬೆಳ್ಳಿ ಆಭರಣ ಮತ್ತು ಎರಡು ಲಕ್ಷ ನಗದು ಪತ್ತೆಯಾಗಿತ್ತು.

ಡಕಾಯಿತಿ ಪ್ರಕರಣದಲ್ಲಿ ಕರ್ನಾಟಕ ಮತ್ತು ಕೇರಳದ ಕುಖ್ಯಾತ ದರೋಡೆಕೋರರು ಪಾಲ್ಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿತ್ತು. ಮೇಲ್ನೋಟಕ್ಕೆ ಕೃತ್ಯ ನಡೆದ ಬಳಿಕ ಸಿಕ್ಕಿದ್ದನ್ನು ಸಮಾನವಾಗಿ ಹಂಚಿಕೊಂಡು ಎರಡೂ ತಂಡ ಪರಾರಿಯಾಗಿತ್ತು ಎನ್ನಲಾಗಿತ್ತು. ಇದೀಗ ಕಾಸರಗೋಡು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇತ್ತ ಉಳ್ಳಾಲದ ಮೂಲಕ ಪರಾರಿಯಾಗಿರುವ ತಂಡದ ಪತ್ತೆಗೆ ಉಳ್ಳಾಲ ಪೊಲೀಸರು ಬಲೆ ಬೀಸಿದ್ದಾರೆ. ಆದರೆ, ಈವರೆಗೂ ಯಾರನ್ನೂ ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿಲ್ಲ.

The investigating team arrested one more accused in the Rajdhani Jewellery dacoity case of Hosangady at Manjeshwar. The total number of arrested rose to two with this arrest. The arrested accused is identified as Mohammed Riyaz (32), resident of Hosmar in Karkala taluk. He was arrested from Kudremukh area by the team led by Kasargod DySP Balakrishnan Nair and Manjeshwar station inspector Santhosh Kumar.