ಕೊಡ್ಯಡ್ಕ ; ಬಂದೂಕು, ಭರ್ಚಿ ಹಿಡಿದು ಕಾಡು ಹಂದಿ ಹಿಡಿಯಲು ಹೋದವರು ಪೊಲೀಸ್ ಬಲೆಗೆ

16-08-21 05:59 pm       Mangaluru Correspondent   ಕ್ರೈಂ

ಕಾಡು ಹಂದಿ ಹಿಡಿಯಲು ಹೋದವರು ಮೂಡುಬಿದ್ರೆ ಪೊಲೀಸರ ಬಲೆಗೆ ಬಿದ್ದಿದ್ದು, ಪ್ರಕರಣ ಸಂಬಂಧಿಸಿ 12 ಮಂದಿಯನ್ನು ಬಂಧಿಸಿದ್ದಾರೆ.

ಮಂಗಳೂರು, ಆಗಸ್ಟ್ 16: ಬಂದೂಕು, ಭರ್ಚಿ ಹಿಡಿದು ಕಾಡು ಹಂದಿ ಹಿಡಿಯಲು ಹೋದವರು ಮೂಡುಬಿದ್ರೆ ಪೊಲೀಸರ ಬಲೆಗೆ ಬಿದ್ದಿದ್ದು, ಪ್ರಕರಣ ಸಂಬಂಧಿಸಿ 12 ಮಂದಿಯನ್ನು ಬಂಧಿಸಿದ್ದಾರೆ.

ಮೂಡುಬಿದ್ರೆ ತಾಲೂಕು ಪುತ್ತಿಗೆ ಗ್ರಾಮದ ಕೊಡ್ಯಡ್ಕ ಬಳಿಯ ಗುಡ್ಡೆಯಂಗಡಿ ಎಂಬಲ್ಲಿ ಎರಡು ಓಮ್ನಿ ಕಾರಿನಲ್ಲಿ ತೆರಳುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಓಮ್ನಿ ಕಾರಿನಲ್ಲಿ ಕಾಡು ಹಂದಿಯನ್ನು ಹಿಡಿಯಲು ಬಲೆ, ಕೋವಿ, ಬಂದೂಕು ಇನ್ನಿತರ ವಸ್ತುಗಳನ್ನು ಸೇರಿಸಿಕೊಂಡು ತೆರಳುತ್ತಿದ್ದಾಗ ಪೊಲೀಸರು ತಪಾಸಣೆ ನಡೆಸಿದ್ದು ಸಿಕ್ಕಿಬಿದ್ದಿದ್ದಾರೆ.

ಕಾರಿನಲ್ಲಿದ್ದ ಎರಡು ಕಾಡು ಹಂದಿ, ನಾಲ್ಕು ಎಸ್ ಬಿಬಿಎಲ್ ಬಂದೂಕು, ಕಾಡು ಹಂದಿಯನ್ನು ಕೊಲ್ಲಲು ಬಳಸಿದ್ದ ಎರಡು ಬಂದೂಕಿನ ತೋಟೆಗಳು, ಬಲೆಗಳು, ಕಬ್ಬಿಣದ ಭರ್ಚಿ, ಹಂದಿಯನ್ನು ಮಾಂಸ ಮಾಡಲು ಬಳಸಿದ ದೊಡ್ಡ ಹಲಗಿನ ಮೂರು ಕತ್ತಿ, ಮೂರು ದೊಡ್ಡ ಚೂರಿಗಳು, ಗ್ಯಾಸ್ ಸಿಲಿಂಡರ್, ಕಾಡು ಹಂದಿಯನ್ನು ಚರ್ಮವನ್ನು ಸುಡಲ ಬಳಸಿದ್ದ ಗ್ಯಾಸ್ ಬರ್ನರ್, ಮರದ ದೊಣ್ಣೆಗಳು, ಕಬ್ಬಿಣದ ಟೇಬಲ್, ಎರಡು ಓಮ್ನಿ ಕಾರು, 12 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಜಾನ್ ಮಿನೇಜಸ್, ಶ್ರೀನಿವಾಸ, ಗುರುಪ್ರಸಾದ್, ಜೋಯಲ್ ಅನಿಲ್ ಡಿಸೋಜ, ಅಜಯ್, ಸನತ್, ಹರೀಶ್ ಪೂಜಾರಿ, ಮೋಹನ್ ಗೌಡ, ನೋಣಯ್ಯ, ವಿನಯ ಪೂಜಾರಿ, ರಮೇಶ್, ಗಣೇಶ್ ಎಂದು ಗುರುತಿಸಲಾಗಿದೆ. ರಸ್ತೆ ಮಧ್ಯೆ ಕತ್ತಿ, ದೊಣ್ಣೆ ಇಟ್ಟುಕೊಂಡು ತೆರಳುತ್ತಿದ್ದ ಕಾರಣಕ್ಕೆ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Mangalore Moodbidri Police arrest 12 persons for hunting wild boar animals, deadly weapons seized.