ತರಕಾರಿ ಗಾಡಿಯಲ್ಲಿ ಆಂಧ್ರದಿಂದ ಚಿಕ್ಕಮಗಳೂರಿಗೆ ಗಾಂಜಾ ಸಪ್ಲೈ ;102 ಕೆ.ಜಿ ಗಾಂಜಾ ವಶ !

28-08-21 03:34 pm       Headline Karnataka News Network   ಕ್ರೈಂ

ತರಕಾರಿ ವಾಹನದಲ್ಲಿ 102 ಕೆ.ಜಿ ಗಾಂಜಾವನ್ನು ಸಾಗಿಸುತ್ತಿದ್ದ ಖತರ್ನಾಕ್ ಖದೀಮರನ್ನು ಕಾಫಿನಾಡು ಚಿಕ್ಕಮಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು, ಆಗಸ್ಟ್ 28: ತರಕಾರಿ ವಾಹನದಲ್ಲಿ 102 ಕೆ.ಜಿ ಗಾಂಜಾವನ್ನು ಸಾಗಿಸುತ್ತಿದ್ದ ಖತರ್ನಾಕ್ ಖದೀಮರನ್ನು ಕಾಫಿನಾಡು ಚಿಕ್ಕಮಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖಚಿತ ಮಾಹಿತಿ ಮೆರೆಗೆ ಸೆನ್ (CEN) ಪೊಲೀಸ್ ಇನ್ಸ್‌ಪೆಕ್ಟರ್ ರಕ್ಷಿತ್ ನೇತೃತ್ವದಲ್ಲಿ ದಾಳಿ ನಡೆಸಿದ ಖಾಕಿ ಪಡೆ, ಚಿಕ್ಕಮಗಳೂರು ತಾಲ್ಲೂಕಿನ ಕರ್ತಿಕೆರೆ ಬಳಿ ಆರೋಪಿಗಳನ್ನು ಲಾಕ್ ಮಾಡಿದೆ. ಚಿಕ್ಕಮಗಳೂರು ಪೊಲೀಸ್ ಇತಿಹಾಸದಲ್ಲೇ ದೊಡ್ಡ ಮಟ್ಟದ ಕಾರ್ಯಾಚರಣೆ ಇದಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರನ್ನು ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಶ್ಲಾಘಿಸಿದ್ದಾರೆ.

ಆಂಧ್ರದಿಂದ ಬಂದಿದ್ದ ಗಾಂಜಾ

ಈ ರೀತಿಯ ಗಾಂಜಾ ರೇಡ್ ಇದು ಮೊದಲೆನಲ್ಲ. ಈ ಹಿಂದೆಯೂ ಹಲವಾರು ದಾಳಿ ನಡೆಸಿ ಪೊಲೀಸರು ಗಾಂಜಾ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಇದು ದೊಡ್ಡಮಟ್ಟದ ಕಾರ್ಯಾಚರಣೆಯಾಗಿದ್ದು, ಈ ಹಿಂದೆ ಬಂಧನ ಮಾಡಿದ ಆರೋಪಿಗಳಿಂದ ಪಡೆದ ಮಾಹಿತಿ ಹಾಗೂ ಈ ಗಾಂಜಾ ಖರೀದಿಯಲ್ಲಿ ಯಾರ್ಯಾರು ಭಾಗಿಯಾಗುತ್ತಾರೆ ಅನ್ನುವ ಮಾಹಿತಿಯನ್ನು ಪಡೆದ ಪೊಲೀಸರು, ಆ ವ್ಯಕ್ತಿಗಳ ಚಲನ- ವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.

ಚಿಕ್ಕಬಳ್ಳಾಪುರದ ಇಬ್ಬರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಗಾಂಜಾವನ್ನು ದೊಡ್ಡ ಮಟ್ಟದಲ್ಲಿ ಡೀಲ್ ಮಾಡಿಕೊಂಡು ಅದನ್ನು ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು ಎಂಬ ಮಾಹಿತಿಯನ್ನು ಅರಿತ ಪೊಲೀಸರು ಆರೋಪಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ನಿನ್ನೆ ಕೂಡ ವಿಶಾಖಪಟ್ಣಣದಿಂದ ಗಾಂಜಾ ಲೋಡ್ ಆಗಿ ಬರುತ್ತಿದ್ದ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಆರೋಪಿಗಳ ಸಮೇತ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದಿಂದ ಗಾಂಜಾವನ್ನು ನಮ್ಮ ರಾಜ್ಯಕ್ಕೆ ಸಾಗಿಸುವುದು ಅಷ್ಟು ಸುಲಭವಲ್ಲ. ಆದರೆ ಈ ಖತರ್ನಾಕ್ ಗ್ಯಾಂಗ್ ಆಂಧ್ರದ ವಿಶಾಖಪಟ್ಟಣದಿಂದ ತುಂಬಾ ಸಲೀಸಾಗಿ ಗಾಂಜಾವನ್ನು ನಮ್ಮ ರಾಜ್ಯಕ್ಕೆ ಸಾಗಿಸುತ್ತಿದ್ದರು. ತರಕಾರಿ ಗಾಡಿಯಲ್ಲಿ ಯಾರಿಗೂ ಅನುಮಾನ ಬಾರದ ಹಾಗೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಗೆ ಗಾಂಜಾ ಪೂರೈಕೆ ಆಗುತ್ತಿತ್ತು. ಪಿಕ್ಅಪ್ ವಾಹನದ ಕೆಳಗಡೆ ಗಾಂಜಾವನ್ನು ಇಟ್ಟು, ಈ ಖತರ್ನಾಕ್‌ಗಳು ತರಕಾರಿಯನ್ನು ಮೇಲೆ ಲೋಡ್ ಮಾಡುತ್ತಿದ್ದರು. ಇದರಿಂದ ಚೆಕ್ಕಿಂಗ್ ಸ್ಥಳಗಳಲ್ಲೂ ಪೊಲೀಸರು ಸೇರಿದಂತೆ ಯಾರಿಗೂ ಕೂಡ ಡೌಟ್ ಬರುತ್ತಿರಲಿಲ್ಲ.

ಚಿಕ್ಕಮಗಳೂರು, ಮಂಗಳೂರು, ಉಡುಪಿ, ಶಿವಮೊಗ್ಗದ ಅನೇಕ ಗಾಂಜಾ ಪಾಯಿಂಟ್‌ಗಳಿಗೆ ಈ ಮಾಲು ಹಂಚಿಕೆಯಾಗುತ್ತಿತ್ತು ಎಂದು ಪೊಲೀಸರಿಗೆ ಮಾಹಿತಿ ಇತ್ತು. ಹಾಗಾಗಿ ಚಿಕ್ಕಮಗಳೂರು ನಗರಕ್ಕೆ ಎಂಟ್ರಿಯಾಗುವ ಮುನ್ನವೇ ತಾಲೂಕಿನ ಕರ್ತಿಕೆರೆ ಬಳಿ ಪೊಲೀಸರು ದಾಳಿ ಆರೋಪಿಗಳನ್ನು ಹೆಡೆಮುರಿಕಟ್ಟುವುದರ ಜೊತೆಗೆ ದೊಡ್ಡಮಟ್ಟದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಹೀಗೆ ಮೂಟೆಗಟ್ಟಲ್ಲೇ ಬರುತ್ತಿದ್ದ ಗಾಂಜಾವನ್ನು ಚಿಕ್ಕ ಚಿಕ್ಕ ಪಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ಹೊರಗಡೆಯಿಂದ ಗಾಂಜಾವನ್ನು ತರುತ್ತಿದ್ದ ವ್ಯಕ್ತಿಗಳು ನೇರವಾಗಿ ಮಾರಾಟ ಮಾಡುತ್ತಿರಲಿಲ್ಲ. ಪ್ರತಿ ಜಿಲ್ಲೆಗಳಲ್ಲೂ ಹೀಗೆ ಹೊರಗಡೆಯಿಂದ ಬಂದ ಗಾಂಜಾವನ್ನು ಮಾರಾಟ ಮಾಡಲು ನಿರ್ದಿಷ್ಟ ವ್ಯಕ್ತಿಗಳು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ನೆಟ್‌ವರ್ಕ್ ವ್ಯಕ್ತಿಗಳಿಗೆ ಗಾಂಜಾವನ್ನು ನೀಡಿ ಡೀಲ್ ಮುಗಿಸಿಕೊಂಡು ಹೊರಗಡೆಯಿಂದ ಬಂದ ವ್ಯಕ್ತಿಗಳು ಕೈತೊಳೆದುಕೊಳ್ಳುತ್ತಿದ್ದರು. ಹೀಗೆ ಆಂಧ್ರದಿಂದ ಬಂದ ಗಾಂಜಾ ಸ್ಥಳೀಯ ವ್ಯಕ್ತಿಗಳ ಕೈ ಸೇರುತ್ತಿತ್ತು. ಆ ವ್ಯಕ್ತಿಗಳ ಕೂಡ ಕೆಲವು ತಂಡಗಳನ್ನ ಮಾಡಿಕೊಂಡು ಗಾಂಜಾವನ್ನು ಕಾಲೇಜು ವಿದ್ಯಾರ್ಥಿಗಳು, ಯುವಕರು, ಕೂಲಿ ಕಾರ್ಮಿಕರನ್ನು ಗುರಿಯಾಗಿಸಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.

"ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ತಂಡವನ್ನು ಚಿಕ್ಕಮಗಳೂರು ಎಸ್‌ಪಿ ಅಕ್ಷಯ್ ಶ್ಲಾಘಿಸಿದ್ದು, ನಗದು ಬಹುಮಾನವನ್ನು ನೀಡಿದ್ದಾರೆ. ಅಲ್ಲದೇ ಇಲಾಖೆಯಿಂದ ಪ್ರಶಸ್ತಿ ಕೊಡಿಸಲು ಶಿಫಾರಸ್ಸು ಮಾಡಲು ಸೂಚಿಸುತ್ತೇನೆ," ಎಂದು ತಿಳಿಸಿದ್ದಾರೆ.