ಬಸ್ ನಿಲ್ದಾಣದಲ್ಲಿ ಸ್ನೇಹಿತರ ಭೇಟಿ ; ಮುಸ್ಲಿಂ ಯುವಕರ ಗುಂಪಿನಿಂದ ನೈತಿಕ ಪೊಲೀಸ್ ಹಲ್ಲೆ ! ಇಬ್ಬರು ವಶಕ್ಕೆ

02-09-21 01:34 pm       Mangaluru Correspondent   ಕ್ರೈಂ

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಬಂದಿದ್ದ ರಾಯಚೂರು ಮೂಲದ ಯುವಕನಿಗೆ ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆಸಿದ ಘಟನೆ ನಡೆದಿದೆ.‌

ಪುತ್ತೂರು, ಸೆ.2: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ಭೇಟಿಯಾಗಲು ಬಂದಿದ್ದ ರಾಯಚೂರು ಮೂಲದ ಯುವಕನಿಗೆ ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು  ಘಟನೆ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
 
ಬಂಧಿತರನ್ನು ಕುರಿಯ ನಿವಾಸಿ ಫಾರೂಕ್ (32), ಬಲ್ನಾಡು ನಿವಾಸಿ ಅಬ್ದುಲ್ ಮಜೀದ್( 21) ಎಂದು ಗುರುತಿಸಲಾಗಿದೆ. ಆರು ತಿಂಗಳ ಹಿಂದೆ ಷೇರ್ ಚಾಟ್ ನಲ್ಲಿ ಪರಿಚಯವಾಗಿದ್ದ ಹುಡುಗಿಯನ್ನು ಭೇಟಿಯಾಗುವ ಉದ್ದೇಶದಿಂದ ಬುಧವಾರ ಮಧ್ಯಾಹ್ನ ರಾಯಚೂರು ಮೂಲದ ಹನುಮಂತರಾಯ ಎಂಬಾತ ಬಂದಿದ್ದ. ಪುತ್ತೂರು ಕೆಎಸ್ ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಯುವತಿಯ ಜೊತೆ ಮಾತನಾಡುತ್ತಿದ್ದಾಗ ಆರು ಜನರ ತಂಡ ಹಲ್ಲೆ ನಡೆಸಿದೆ.‌

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ದದ್ದಲ ಗ್ರಾಮದ ನಿವಾಸಿ, ಯುವಕ ಹನುಮಂತರಾಯ(19) ಆರು ತಿಂಗಳ ಹಿಂದೆ ಹುಡುಗಿಯ ಪರಿಚಯ ಆಗಿದ್ದು ಚಾಟಿಂಗ್ ಮತ್ತು ಫೋನ್ ನಂಬರ್ ಪಡೆದು ಮಾತನಾಡುತ್ತಿದ್ದರು.‌ ಹುಡುಗಿಯನ್ನು ಭೇಟಿಯಾಗಲೆಂದು ತನ್ನ ಸ್ನೇಹಿತ ಚೌಡಯ್ಯ ಎಂಬ ಯುವಕನೊಂದಿಗೆ ಪುತ್ತೂರಿಗೆ ಬಂದಿದ್ದ. ‌ಇದೇ ವೇಳೆ, ಹುಡುಗಿ ತನ್ನ ಸ್ನೇಹಿತೆಯ ಜೊತೆಗೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಳು.‌ ನಾಲ್ವರೂ ಬಸ್ ನಿಲ್ದಾಣದಲ್ಲಿ ಮಾತನಾಡುತ್ತಿದ್ದ ವೇಳೆ, ಐದಾರು ಮಂದಿ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಇವರ ಮೇಲೆ ಹಲ್ಲೆ ನಡೆಸಿದ್ದಾರೆ. ‌

ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಹನುಮಂತರಾಯ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಇದೀಗ ಹಲ್ಲೆ ನಡೆಸಿದ್ದ ತಂಡದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿಯೇ ಸ್ನೇಹದ ನೆಪದಲ್ಲಿ ಭೇಟಿಯಾಗಿದ್ದನ್ನೇ ನೆಪವಾಗಿರಿಸಿ ಮುಸ್ಲಿಂ ಗುಂಪು ಹಲ್ಲೆ ನಡೆಸಿದ್ದು ಹಿಂದು ಸಂಘಟನೆಗಳ ಕಾರ್ಯಕರ್ತರು ನಡೆಸುವ ನೈತಿಕ ಪೊಲೀಸ್ ರೀತಿಯ ವರ್ತನೆಯೇ ಆಗಿತ್ತು.

Puttur Group of people intercepts questions two men woman seen together