ಪೊಲೀಸರ ಮಾಹಿತಿದಾರನೇ ಆಗಿದ್ದ ಡ್ರಗ್ ಡೀಲರ್​ ! ಮಫ್ತಿಯಲ್ಲಿ ಬಂದ ಖಾಕಿ ಪತ್ತೆ ಮಾಡಿತ್ತು ಅಸಲಿ ಮುಖ !

04-09-21 01:23 pm       Bangalore Correspondent   ಕ್ರೈಂ

ಡ್ರಗ್ಸ್ ವಹಿವಾಟಿನ ಬಗ್ಗೆ ಅನುಮಾನ ಬಾರದಿರಲಿ ಎಂದು ಆತನೇ ಪೊಲೀಸರಿಗೆ ಮಾಹಿತಿದಾರನಾಗಿ ಗುರುತಿಸಿಕೊಂಡಿದ್ದ. ಆದರೆ, ಈಗ ತಾನೇ ಡ್ರಗ್ಸ್ ಜಾಲದಲ್ಲಿ ಬಿದ್ದು ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಬೆಂಗಳೂರು, ಸೆ.4 : ತನ್ನ ಡ್ರಗ್ಸ್ ವಹಿವಾಟಿನ ಬಗ್ಗೆ ಅನುಮಾನ ಬಾರದಿರಲಿ ಎಂದು ಆತನೇ ಪೊಲೀಸರಿಗೆ ಮಾಹಿತಿದಾರನಾಗಿ ಗುರುತಿಸಿಕೊಂಡಿದ್ದ. ಪೊಲೀಸರಿಗೆ ಇತರ ಆರೋಪಿಗಳ ಬಗ್ಗೆ ಮಾಹಿತಿ ಕೊಟ್ಟು ಡ್ರಗ್ಸ್ ಜಾಲದಲ್ಲಿ ಸಿಲುಕಿಸುತ್ತಿದ್ದ. ಆದರೆ, ಈಗ ತಾನೇ ಡ್ರಗ್ಸ್ ಜಾಲದಲ್ಲಿ ಬಿದ್ದು ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ರತನ್ ಲಾಲ್ ಬಂಧಿತ ಆರೋಪಿಯಾಗಿದ್ದು, ಆತನಿಂದ ಏರ್​​​ ಗನ್, 150 ಗ್ರಾಂ ಗಾಂಜಾ, 150 ಗ್ರಾಂ ಅಫೀಮು, ಒಂದಷ್ಟು ಸಿಂಥೆಟಿಕ್ ಡ್ರಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಹಲವು ವರ್ಷಗಳಿಂದ ಡ್ರಗ್ಸ್ ದಂಧೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ. ಈತ ನೀಡಿದ ಸುಳಿವಿನ ಮೇರೆಗೆ ಜಯನಗರ, ಗಿರಿನಗರ, ಹಲಸೂರು ಗೇಟ್ ಪೊಲೀಸರು ಆರೋಪಿಗಳನ್ನು ಹಿಡಿದು ತರುತ್ತಿದ್ದರು.

 

ಮಾದಕ ವಸ್ತು ಜಾಲದಲ್ಲಿ ತೊಡಗಿರುವ ಮಾಹಿತಿ ಮೇರೆಗೆ ಮೊನ್ನೆ ಮಫ್ತಿಯಲ್ಲಿದ್ದ ಪೊಲೀಸರು ರತನ್ ಲಾಲ್ ನನ್ನು ಬಂಧಿಸಲು ಮುಂದಾಗಿದ್ದಾರೆ. ಆದರೆ ಇದರಿಂದ ಭೀತಿಗೊಳಗಾಗಿ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ, ತನ್ನನ್ನು ಯಾರೋ ಕಿಡ್ಯಾಪ್ ಮಾಡುತ್ತಿರುವುದಾಗಿ ತಿಳಿಸಿದ್ದ. ಕರೆಯ ಬೆನ್ನಲ್ಲೇ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ತೆರಳಿದಾಗ‌ ಮಫ್ತಿಯಲ್ಲಿ ಬಂದಿದ್ದು ನಿಜವಾದ ಪೊಲೀಸರೇ ಎನ್ನುವುದು ತಿಳಿದುಬಂದಿದೆ. ಬಳಿಕ ರತನ್ ಲಾಲ್ ಹಾಗೂ ಮತ್ತೋರ್ವನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿತ್ತು. 

ಎಂಟು ವರ್ಷಗಳಿಂದ ಖುದ್ದು ದಂಧೆಕೋರರಿಂದ ಡ್ರಗ್ಸ್​ ಖರೀದಿಸಿ ವಹಿವಾಟು ನಡೆಸುತ್ತಿದ್ದ. ತನ್ನ‌ ಮೇಲೆ ಅನುಮಾನ ಬಾರದಿರಲಿ ಎಂದು ಪೊಲೀಸರಿಗೆ ಮಾಹಿತಿದಾರನಾಗಿಯೂ ಗುರುತಿಸಿಕೊಂಡಿದ್ದ. ಈಗಾಗಲೇ ಆರೋಪಿಯಿಂದ ಸಿಂಥೆಟಿಕ್ ಹಾಗೂ ನಾನ್ ಸಿಂಥೆಟಿಕ್ ಡ್ರಗ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.