ಬ್ರೇಕಿಂಗ್ ನ್ಯೂಸ್
04-09-21 03:58 pm Headline Karnataka News Network ಕ್ರೈಂ
ಚೆನ್ನೈ, ಸೆ. 4: ನೀಲಗಿರಿ ಜಿಲ್ಲೆಯ ಕೋಡನಾಡ್ ಎಸ್ಟೇಟ್ ಅಂದ್ರೆ, ಒಂದು ಕಾಲದಲ್ಲಿ ನಾಡಿನ ದೊರೆಯ ಎರಡನೇ ಮನೆಯೇ ಆಗಿತ್ತು. ಅಲ್ಲಿಯೇ ತಮಿಳುನಾಡು ಪಾಲಿಗೆ ಅಮ್ಮನಾಗಿದ್ದ ಜಯಲಲಿತಾ ರೆಸಾರ್ಟ್ ಮಾಡಿಕೊಂಡಿದ್ದರು. ಬೇಸಗೆ ಕಾಲದಲ್ಲಿ ಮುಖ್ಯಮಂತ್ರಿಯ ಎರಡನೇ ಗೃಹಕಚೇರಿಯಾಗಿ ಕೋಡನಾಡ್ ಎಸ್ಟೇಟ್ ಒಳಗಿದ್ದ ಬಂಗಲೆ ಪರಿವರ್ತನೆಯಾಗಿದ್ದೂ ಇತ್ತು. ಆಸುಪಾಸು ಕೆಲವು ಸಾವಿರ ಎಕ್ರೆ ವ್ಯಾಪ್ತಿಯನ್ನು ಹೊಂದಿರುವ ಕೋಡನಾಡ್ ಎಸ್ಟೇಟ್ ಮಾಜಿ ಸಿಎಂ ಜಯಲಲಿತಾ ಮತ್ತು ಆಕೆಯ ಆಪ್ತೆಯಾಗಿದ್ದ ಸಸಿಕಲಾಗೆ ಸೇರಿದ್ದು. 2017ರಲ್ಲಿ ಜಯಲಲಿತಾ ತೀರಿಕೊಂಡ ನಾಲ್ಕೇ ತಿಂಗಳಲ್ಲಿ ಈ ಎಸ್ಟೇಟ್ ಒಳಗಿನ ಬಂಗಲೆಯಲ್ಲಿ ನಡೆದಿತ್ತು ಎನ್ನಲಾದ ನೂರಾರು ಕೋಟಿ ರೂಪಾಯಿ ದರೋಡೆ ಮತ್ತು ಆನಂತರದ ಐದಾರು ಹತ್ಯೆ ಪ್ರಕರಣಗಳು ನಾಲ್ಕು ವರ್ಷಗಳ ಬಳಿಕ ಸದ್ದು ಮಾಡಲಾರಂಭಿಸಿದೆ.
ಅತ್ತ ದರೋಡೆ ಘಟನೆ ನಡೆಯೋಕೂ ಮುನ್ನ ನಾಲ್ಕು ತಿಂಗಳ ಹಿಂದೆ ಜಯಲಲಿತಾ ತೀರಿಕೊಂಡಿದ್ದರೆ, ಆನಂತರ ಒಂದೆರಡು ತಿಂಗಳಲ್ಲಿ ಅಷ್ಟೂ ಸಾಮ್ರಾಜ್ಯಕ್ಕೆ ಅಧಿ ನಾಯಕಿಯಂತಿದ್ದ ಸಸಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿದ್ದರು. ಆದರೆ, ಇದೇ ಸಂದರ್ಭದಲ್ಲಿ ಜಯಲಲಿತಾ ಅವರ ಎಐಎಡಿಎಂಕೆ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಜಯಲಲಿತಾ ಮತ್ತು ಸಸಿಕಲಾ ಅವರ ಆಪ್ತನಾಗಿದ್ದ ಇ.ಎಸ್. ಪಳನಿಸ್ವಾಮಿ ಮುಖ್ಯಮಂತ್ರಿ ಆಗಿ ಅಧಿಕಾರಕ್ಕೇರಿದ್ದರು. ಆದರೆ, ದರೋಡೆ ಘಟನೆಗೆ ಪ್ರತೀಕಾರವೋ ಎನ್ನುವಂತೆ ಆನಂತರ ಕೃತ್ಯಕ್ಕೆ ಕಾರಣವಾಗಿದ್ದ ಕೆಲವರನ್ನು ಸದ್ದಿಲ್ಲದೇ ಮುಗಿಸಲಾಗಿತ್ತು. ಅರ್ಥಾತ್ ಪೊಲೀಸರನ್ನು ಬಳಸಿ ಪ್ರಕರಣವನ್ನು ಮುಚ್ಚಿ ಹಾಕಲು ಕೊಲೆ ಸರಣಿಯನ್ನೇ ಮಾಡಲಾಗಿತ್ತು ಅನ್ನುವ ಆರೋಪ ಕೇಳಿಬಂದಿತ್ತು.
ಅಂದಿನ ಘಟನೆಗಳು ಈಗ ಮತ್ತೆ ಮುಳ್ಳಾಗಿ ಕಾಣಿಸಿಕೊಂಡಿದ್ದು, ಹಿಂದಿನ ಮುಖ್ಯಮಂತ್ರಿ ಪಳನಿಸ್ವಾಮಿ ಕೊರಳಿಗೆ ಸುತ್ತಿಕೊಳ್ಳುತ್ತಾ ಅನ್ನುವ ಅನುಮಾನ ಎದ್ದಿದೆ. ಯಾಕಂದ್ರೆ, ತಮಿಳುನಾಡಿನಲ್ಲೀಗ ಎಐಎಡಿಎಂಕೆ ಪಕ್ಷದ ಬದ್ಧ ವೈರಿಯಾಗಿರುವ ಡಿಎಂಕೆ ಮತ್ತು ಅದರ ಅಧಿಪತಿ ಸ್ಟಾಲಿನ್ ಅಧಿಕಾರಕ್ಕೇರಿದ್ದಾರೆ. ಅಷ್ಟೇ ಅಲ್ಲ, ದರೋಡೆ ಕೃತ್ಯವನ್ನು ಮುಚ್ಚಿ ಹಾಕಲು ಮತ್ತು ಅದಕ್ಕೆ ಕಾರಣವಾಗಿದ್ದವರನ್ನು ಸದ್ದಿಲ್ಲದೆ ಮುಗಿಸಿಬಿಡಲು ಮಾಡಿದ್ದ ಕುತಂತ್ರ ಹಾಗೂ ಅದಕ್ಕೆ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿದ್ದಾರೆಂಬ ಆರೋಪವನ್ನು ಮುಖ್ಯಮಂತ್ರಿ ಸ್ಟಾಲಿನ್ ಗುರಾಣಿಯಾಗಿ ಬಳಸಿಕೊಂಡಿದ್ದಾರೆ. ಹೀಗಾಗಿ ಹಿಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಗೆ ಚಳಿಯಲ್ಲೂ ನಡುಕ ಶುರುವಾಗಿದ್ದರೆ, ಕೃತ್ಯದಲ್ಲಿ ಜೈಲಿಗೆ ಹೋಗಿದ್ದವರು ಕತ್ತಿ ಮಸೆಯುತ್ತಿದ್ದಾರೆ. ಇಷ್ಟಕ್ಕೂ ಅಲ್ಲಿ ಏನಾಗಿತ್ತು ಅನ್ನೋದನ್ನು ನೋಡ್ಕಂಡು ಬರೋಣ ಬನ್ನಿ.
ನಾಲ್ಕು ವರ್ಷಗಳ ಹಿಂದೆ ಆಗಿತ್ತು ದರೋಡೆ, ಮರ್ಡರ್ !
ಅದು 2017ರ ಆಗಸ್ಟ್ 23, ರಾತ್ರಿ ಗಂಟೆ ಸುಮಾರು 10.30 ಆಗಿತ್ತು. ಆವತ್ತಿಗೆ ತಮಿಳರ ಅಮ್ಮ ಜಯಲಲಿತಾ ತೀರಿಕೊಂಡು ನಾಲ್ಕು ತಿಂಗಳು ಆಗಿತ್ತಷ್ಟೇ. ಕೋಡನಾಡ್ ಎಸ್ಟೇಟಿನಲ್ಲಿದ್ದ ಆಕೆಯ ವೈಭವೋಪೇತ ಬಂಗಲೆಯ ಎಂಟನೇ ಗೇಟ್ ಮುಂದೆ ಎರಡು ಕಾರು ಬಂದು ನಿಂತಿತ್ತು. ಜಯಲಲಿತಾ ಸಿಎಂ ಆಗಿದ್ದ ಕಾಲದಲ್ಲಿ ಆಕೆಯ ಪೋಯೆಸ್ ಗಾರ್ಡನ್ ಮನೆಯಲ್ಲಿ ಕಾರಿನ ಡ್ರೈವರ್ ಆಗಿದ್ದ ಕನಗರಾಜು ಮತ್ತು ಆತನ ಹನ್ನೊಂದು ಮಂದಿ ಸಹಚರರು ರಾತ್ರಿ ವೇಳೆ ದಾಂಗುಡಿ ಇಟ್ಟಿದ್ದರು. ಬಂಗಲೆಯ ಗೇಟನ್ನು ಮುರಿದು ಒಳನುಗ್ಗಿದ್ದ ತಂಡ, ಅಲ್ಲಿ ಕಾವಲಿದ್ದ ಕೃಷ್ಣ ತಾಪ ಅನ್ನೋ ನೇಪಾಳ ಮೂಲದ ಕಾವಲುಗಾರನನ್ನು ಹಗ್ಗದಿಂದ ಕಟ್ಟಿ ಅಲ್ಲಿಯೇ ಇದ್ದ ಲಾರಿಯಲ್ಲಿ ತುಂಬಿಸಿತ್ತು. ಆನಂತರ ಇತರೇ ಕಾವಲುಗಾರರ ಮೇಲೆ ದೃಷ್ಟಿ ನೆಟ್ಟಿತ್ತು. ಹತ್ತನೇ ಗೇಟಿನಲ್ಲಿದ್ದ ಓಂ ಬಹಾದುರ್ ಅನ್ನೋ ಗೂರ್ಖ ಸೆಕ್ಯುರಿಟಿಯನ್ನು ಆಗಂತುಕರು ಕೊಂದು ಹಾಕಿದ್ದರು.
ಆನಂತರ ಬಂಗಲೆಯ ಕಿಟಕಿಯನ್ನು ಕಬ್ಬಿಣದ ರಾಡ್ ಬಳಸಿ, ಕಿತ್ತು ಒಳನುಗ್ಗಿದ್ದ ಆಗಂತುಕರು ಜಯಲಲಿತಾ ಕುಳಿತುಕೊಳ್ಳುತ್ತಿದ್ದ ಸಿಎಂ ಕಚೇರಿ ಮತ್ತು ಇತರ ಮೂರು ಕೋಣೆಗಳಲ್ಲಿ ತಡಕಾಡಿದ್ದರು. ಒಳಗಡೆ ಅವಿತಿಟ್ಟ ಹಣ ಇದೆಯಾ ಅನ್ನೋದನ್ನು ಸರ್ಚ್ ಮಾಡಿತ್ತು. ಆದರೆ, ಅಲ್ಲಿ ಯಾವುದೇ ಹಣ ಸಿಕ್ಕಿರಲಿಲ್ಲ ಎನ್ನಲಾಗಿತ್ತು. ಆದರೆ, ಅಲ್ಲಿ 200 ಕೋಟಿ ರೂಪಾಯಿ ನಗದು ಹಣ ಇತ್ತು ಅನ್ನೋ ಅನುಮಾನದಲ್ಲಿ ದರೋಡೆಗೆ ಸ್ಕೆಚ್ ಹಾಕಲಾಗಿತ್ತು. ಪೊಲೀಸರು ಹಾಕಿರುವ ಚಾರ್ಜ್ ಶೀಟ್ ನಲ್ಲಿ, ದರೋಡೆ ತಂಡದ ಸೂತ್ರಧಾರಿಯಾಗಿದ್ದ ಕನಗರಾಜು ತನ್ನ ಸಹಚರ ಸಾಯನ್ ಬಳಿ 200 ಕೋಟಿ ನಗದು ಇರುವುದಾಗಿ ಹೇಳಿಕೊಂಡಿದ್ದ ಎಂದು ಉಲ್ಲೇಖಿಸಿದ್ದರು. ನಗದು ಹಣದ ಬದಲಿಗೆ, ಒಂದಷ್ಟು ಕ್ರಿಸ್ಟಲ್ ರಿನೋ ವಾಚುಗಳು ಮತ್ತೊಂದಷ್ಟು ಬೆಲೆಬಾಳುವ ವಸ್ತುಗಳನ್ನು ಅವರು ದೋಚಿಕೊಂಡು ಹೋಗಿದ್ದರಂತೆ.
ಒಂದೇ ವಾರದಲ್ಲಿ ನಡೆದಿತ್ತು ಪ್ರತೀಕಾರ
ಇತ್ತ ಎಡಪ್ಪಾಡಿ ಪಳನಿಸ್ವಾಮಿ ಸಿಎಂ ಆಗಿ ಅಧಿಕಾರದಲ್ಲಿದ್ದಾಗಲೇ ಜಯಲಲಿತಾ ಅಮ್ಮನ ಬಂಗಲೆಯಲ್ಲಿ ದರೋಡೆ ನಡೆದಿದ್ದು ಮತ್ತು ಅಲ್ಲಿದ್ದ ಕಾವಲುಗಾರನ ಹತ್ಯೆ ನಡೆದಿದ್ದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಷ್ಟೇ ಅಲ್ಲಾ ಎಐಎಡಿಎಂಕೆ ಪಾಲಿಗೆ ಭಾರೀ ಮುಜುಗರವನ್ನೂ ಸೃಷ್ಟಿಸಿತ್ತು. ಯಾಕಂದ್ರೆ, ದಾಳಿ ಸೂತ್ರಧಾರನಾಗಿದ್ದ ಕನಗರಾಜು ಎಡಪ್ಪಾಡಿ ಪಳನಿಸ್ವಾಮಿಯ ಊರಿನವನೇ ಆಗಿದ್ದ. ಹಾಗಾಗಿ, ಪಳನಿಸ್ವಾಮಿಯೇ ಈ ಕೃತ್ಯ ಮಾಡಿಸಿದ್ದಾರೆಯೇ ಅನ್ನುವ ಅನುಮಾನ ಎದ್ದಿತ್ತು. ಇದೇ ದ್ವೇಷದ ಕಾರಣಕ್ಕೋ ಅಲ್ಲಾ ಉಂಡ ಮನೆಗೆ ಕೇಡು ಬಗೆದ ಎಂದು ಸೇಡಿನ ಕಾರಣಕ್ಕೋ ಒಂದೇ ವಾರದಲ್ಲಿ ಕೊಲೆ ಸರಣಿಯೇ ನಡೆದುಹೋಗಿತ್ತು.
ಘಟನೆ ನಡೆದ ಐದೇ ದಿನದಲ್ಲಿ ದರೋಡೆ ಕೃತ್ಯದ ಸೂತ್ರಧಾರಿಯಾಗಿದ್ದ ಕನಗರಾಜು ಸೇಲಂ- ಚೆನ್ನೈ ಹೈವೇಯ ಅತ್ತೂರು ಎಂಬಲ್ಲಿ ಅಪಘಾತಕ್ಕೀಡಾಗಿ ದುರಂತ ಸಾವು ಕಂಡಿದ್ದ. ಅದೇ ದಿನ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದ ಮೂಲತಃ ಕೇರಳದ ತೃಶ್ಶೂರು ಜಿಲ್ಲೆಯ ಸಾಯನ್, ಆತನ ಊರು ಪಾಲ್ಘಾಟಿನಲ್ಲೇ ಅಪಘಾತಕ್ಕೀಡಾಗಿದ್ದ. ಆದರೆ, ಅಫಘಾತದಲ್ಲಿ ಸಾಯನ್ ಅಪಾಯದಿಂದ ಪಾರಾಗಿದ್ದರೆ, ಕಾರಿನಲ್ಲಿದ್ದ ಆತನ ಪತ್ನಿ ಮತ್ತು ಮಗಳು ದುರಂತ ಸಾವು ಕಂಡಿದ್ದರು. ಇವೆರಡು ಘಟನೆಗಳ ಬಗ್ಗೆಯೂ ಸಂಶಯ ಉಂಟಾಗಿತ್ತು. ಇಬ್ಬರನ್ನೂ ಅಪಘಾತದ ನೆಪದಲ್ಲಿ ಕೊಲೆ ಮಾಡುವ ಯತ್ನ ನಡೆದಿತ್ತು ಅನ್ನೋ ಆರೋಪ ಕೇಳಿಬಂದಿತ್ತು.
ಆನಂತರ ಒಂದು ತಿಂಗಳ ಅಂತರದಲ್ಲಿ ಜುಲೈ 3ರಂದು ಕೋಡನಾಡ್ ಎಸ್ಟೇಟ್ ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ದಿನೇಶ್ ಕುಮಾರ್ ಎಂಬಾತ ನಿಗೂಢ ಸಾವನ್ನಪ್ಪಿದ್ದ. ಪೊಲೀಸರು ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದರೂ, ಅದೊಂದು ವ್ಯವಸ್ಥಿತ ಕೊಲೆ ಎನ್ನುವ ಆರೋಪ ಕೇಳಿಬಂದಿತ್ತು. ಆನಂತರ ಎರಡು ತಿಂಗಳ ನಂತರ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದು, ಕನಗರಾಜು ಹೊರತುಪಡಿಸಿ ಉಳಿದ ಹತ್ತು ಮಂದಿ ಕೇರಳದವರೇ ಆರೋಪಿಗಳಾಗಿದ್ದರು. 300 ಪುಟಗಳ ಚಾರ್ಜ್ ಶೀಟ್ ಹಾಕಿದ್ದರೂ, ತನಿಖೆಯಲ್ಲಿ ಗಂಭೀರ ಲೋಪ ಆಗಿದ್ದ ಆರೋಪಗಳಿದ್ದವು. ಅದರ ಪ್ರಕಾರ, ಕನಗರಾಜು ಮತ್ತು ಸಾಯನ್ ಗೆಳೆಯರಾಗಿದ್ದು ಕೊಯಂಬತ್ತೂರಿನಲ್ಲಿ ಭೇಟಿಯಾಗಿದ್ದರು. ಆನಂತರ ಅಲ್ಲಿಯೇ ಕುಳಿತು, ಕೋಡನಾಡ್ ಎಸ್ಟೇಟ್ ಅರಮನೆ ದೋಚುವ ಪ್ಲಾನ್ ಹಾಕಿದ್ದರು ಎನ್ನಲಾಗಿತ್ತು.
ಪ್ರಕರಣ ಆನಂತರ ನೀಲಗಿರಿ ಸೆಶನ್ಸ್ ಕೋರ್ಟಿನಲ್ಲಿ ವಿಚಾರಣೆಗೆ ಬಂದಿತ್ತು. ಆದರೆ, ಈ ನಡುವೆ ಪೊಲೀಸರ ಕಡೆಯಿಂದ ತನಿಖೆಯಲ್ಲಿ ಲೋಪಗಳಾಗಿದ್ದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ತನಿಖೆ ವೇಳೆ, ವಿಚಾರಣೆಗೆ ಮಹತ್ವದ್ದಾಗಿದ್ದ ಅಪರಾಧ ನಡೆದಿದ್ದ ಜಯಲಲಿತಾರಿಗೆ ಸೇರಿದ ಅರಮನೆಯ ಫೋಟೋ ಆಗಲೀ, ವಿಡಿಯೋವನ್ನಾಗಲೀ ಪೊಲೀಸರು ಸಂಗ್ರಹಿಸಿರಲಿಲ್ಲ. ಇಡೀ ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಕಾವಲುಗಾರ ನೇಪಾಳ ಮೂಲದ ಕೃಷ್ಣ ತಾಪನನ್ನು ಸೇಫ್ ಆಗಿ ಉಳಿಸಿಕೊಂಡಿಲ್ಲ. ಪೊಲೀಸರು ಆತ, ನೇಪಾಳಕ್ಕೆ ಹಿಂತಿರುಗಿದ್ದಾನೆ ಎನ್ನುತ್ತಿದ್ದರೆ, ಈಗ ಎಲ್ಲಿದ್ದಾನೆ ಅನ್ನುವುದರ ಬಗ್ಗೆ ಐಡಿಯಾ ಇರಲಿಲ್ಲ. ಇದಲ್ಲದೆ, ಪೊಲೀಸರು ರೆಡಿ ಮಾಡಿದ್ದ 103 ತನಿಖಾ ಸಾಕ್ಷ್ಯಗಳ ಪೈಕಿ 43 ಸಾಕ್ಷ್ಯಗಳು ಬಿದ್ದು ಹೋಗಿದ್ದವು.
ಪ್ರಕರಣ ಮುಚ್ಚಿ ಹಾಕಲು ಆಡಳಿತ ದುರುಪಯೋಗ
ಇತ್ತ ನೀಲಗಿರಿ ಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ಬರುತ್ತಲೇ ಕಳೆದ ಎಪ್ರಿಲ್ ತಿಂಗಳಲ್ಲಿ ಆರೋಪಿಗಳು ಉಲ್ಟಾ ಹೊಡೆದಿದ್ದಾರೆ. ಇಡೀ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಮುಚ್ಚಿ ಹಾಕಲು ಪೊಲೀಸರನ್ನು ದುರುಪಯೋಗ ಮಾಡಲಾಗಿದೆ ಎಂದು ಮೇಲಿನ ಕೋರ್ಟಿನಲ್ಲಿ ಅಪೀಲು ಮಾಡಿದ್ದರು. ಇದಕ್ಕಾಗಿ ನೀಲಗಿರಿ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠರು ಸೇರಿದಂತೆ ಇಪಿಎಸ್ ಮತ್ತು ಸಸಿಕಲಾ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅರ್ಜಿ ಹಾಕಿದ್ದರು. ಆದರೆ, ನೀಲಗಿರಿ ಕೋರ್ಟಿನಲ್ಲಿ ಈ ಅರ್ಜಿ ವಜಾ ಆಗುತ್ತಿದ್ದಂತೆ ಆರೋಪಿಗಳು ಮದ್ರಾಸ್ ಹೈಕೋರ್ಟಿಗೆ ಮೇಲ್ಮನವಿ ಹೋಗಿದ್ದಾರೆ. ನೀಲಗಿರಿ ಕೋರ್ಟಿನಲ್ಲಿ ಪ್ರಕರಣದ ವಿಚಾರಣೆಯಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದವರು ಪ್ರಭಾವ ಬೀರಿದ್ದಾರೆ ಎಂದೂ ಹೈಕೋರ್ಟ್ ಅರ್ಜಿಯಲ್ಲಿ ದೂರಿದ್ದಾರೆ.
ಈ ನಡುವೆ, ಜಾಮೀನು ಮೇಲೆ ಜೈಲಿನಿಂದ ಹೊರಬಂದಿದ್ದ ಆರೋಪಿ ಸಾಯನ್ ಮತ್ತು ಮನೋಜ್, ಮಾಧ್ಯಮಗಳ ಮುಂದೆ ಮುಖ್ಯಮಂತ್ರಿ ಪಳನಿಸ್ವಾಮಿ ವಿರುದ್ಧ ಆರೋಪ ಮಾಡಿದ್ದರು. ಎಸ್ಟೇಟ್ ನಲ್ಲಿದ್ದ ಮಹತ್ವದ ದಾಖಲೆ ಪ್ರತಿಗಳು ಮತ್ತು ಹಣವನ್ನು ಪಳನಿಸ್ವಾಮಿ ತಾವೇ ವಶಕ್ಕೆ ಪಡೆದಿದ್ದರು ಎಂದು ಆರೋಪಿಸಿದ್ದರು. ಆರೋಪವನ್ನು ನಿರಾಕರಿಸಿದ್ದ ಪಳನಿಸ್ವಾಮಿ, ತನ್ನ ವಿರುದ್ಧದ ಆರೋಪದ ಬಗ್ಗೆ ಒಂದು ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ಡಿಎಂಕೆ, ಪಳನಿಸ್ವಾಮಿ ರಾಜಿನಾಮೆಗೆ ಒತ್ತಾಯಿಸಿತ್ತು. ಈ ಬೆಳವಣಿಗೆಗೆ ಪ್ರತೀಕಾರ ಎನ್ನುವಂತೆ, ಆರೋಪಿ ಸಾಯನ್ ಜಾಮೀನನ್ನು ಸರಕಾರ ರದ್ದುಪಡಿಸಿ ಮತ್ತೆ ಜೈಲಿಗೆ ತಳ್ಳಿತ್ತು.
ಪಳನಿಸ್ವಾಮಿ ಕೊರಳು ಸುತ್ತಿಕೊಳ್ಳುತ್ತಾ ಕೇಸು
ಆನಂತರ ಚುನಾವಣೆ ನಡೆದು ಸಿಎಂ ಪಳನಿಸ್ವಾಮಿ ಅಧಿಕಾರ ಕಳಕೊಂಡಿದ್ದರೆ, ರಾಜಕೀಯ ವಿರೋಧಿ ಡಿಎಂಕೆಯ ಸ್ಟಾಲಿನ್ ಅಧಿಕಾರಕ್ಕೇರಿದ್ದರು. ಇತ್ತ ಜೈಲಿನಲ್ಲಿದ್ದ ಸಾಯನ್ ಸೇರಿದಂತೆ ಆರೋಪಿಗಳು ಮತ್ತೆ ಜಾಮೀನು ಪಡೆದು ಹೊರಬಂದಿದ್ದಾರೆ. ಇಷ್ಟಾಗುತ್ತಿದ್ದಂತೆ ರಾಜಕೀಯ ಬೆಳವಣಿಗೆ ನಡೆದಿದ್ದು, ಇದೇ ಆಗಸ್ಟ್ ತಿಂಗಳಲ್ಲಿ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನೀಲಗಿರಿ ಕೋರ್ಟಿನಲ್ಲಿ ಮೆಮೋ ಒಂದನ್ನು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಹೆಚ್ಚುವರಿ ತನಿಖೆಗೆ ಅವಕಾಶ ನೀಡಬೇಕೆಂದು ಕೇಳಿದ್ದಾರೆ. ಮತ್ತಷ್ಟು ಮಾಹಿತಿಗಳು ತಿಳಿದುಬಂದಿದ್ದು, ಈ ಬಗ್ಗೆ ತನಿಖೆ ನಡೆಸಬೇಕಾಗಿದೆ. ನಾವು ಆರೋಪಿ ಸಾಯನ್ ಗೆ ಸಮನ್ಸ್ ನೀಡಿದ್ದು, ತನಿಖೆ ನಡೆಸುತ್ತೇವೆ ಎಂದಿದ್ದಾರೆ. ಹೀಗಾಗಿ ಹೈಪ್ರೊಫೈಲ್ ಕೋಡನಾಡ್ ಎಸ್ಟೇಟ್ ಪ್ರಕರಣ ಮತ್ತೆ ಸದ್ದು ಮಾಡಿದ್ದು, ಹಿಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಯ ಎದೆಯಲ್ಲಿ ನಡುಕ ಸೃಷ್ಟಿಸಿದೆ.
ಮತ್ತೆ ತಮಿಳರ ವೈರತ್ವದ ರಾಜಕಾರಣ
ತಮಿಳುನಾಡಿನಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ಇದ್ದಾಗಲೂ ವೈರತ್ವದ ರಾಜಕಾರಣವೇ ನಡೆದುಬಂದಿತ್ತು. ಇಬ್ಬರು ಕೂಡ ತಾವು ಅಧಿಕಾರಕ್ಕೇರುತ್ತಿದ್ದಂತೆ, ಹಳೆ ಪ್ರಕರಣಗಳನ್ನು ಕೆದಕಿ ರಾಜಕೀಯ ವಿರೋಧಿಗಳನ್ನು ಮಟ್ಟಹಾಕುತ್ತಿದ್ದುದು ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜಯಲಲಿತಾ ಅಧಿಕಾರಕ್ಕೆ ಬಂದು ಒಂದೆರಡು ದಿನಗಳಲ್ಲಿ ರಾತ್ರೋರಾತ್ರಿ ಕರುಣಾನಿಧಿಯನ್ನು ಪೊಲೀಸರ ಮೂಲಕ ಮನೆಯಿಂದಲೇ ದರ ದರನೆ ಎಳ್ಕೊಂಡು ಹೋಗುವಂತೆ ಮಾಡಿಸಿದ್ದು, ಇದರ ಪ್ರತೀಕಾರವನ್ನು ಡಿಎಂಕೆ ನಾಯಕರು ಆನಂತರ ತೀರಿಸಿಕೊಂಡಿದ್ದೆಲ್ಲ ಇತಿಹಾಸ. ಈಗ ಅವರಿಬ್ಬರೂ ಇಲ್ಲವಾಗಿದ್ದಾರೆ. ಆದರೆ, ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರ ರಕ್ತದಲ್ಲೇ ಈ ರೀತಿಯ ವೈರತ್ವದ ರಾಜಕಾರಣ ಇದೆಯೋ ಎನ್ನುವ ರೀತಿ ಹಳೆ ಪ್ರಕರಣವನ್ನು ಕೆದಕಿ ಸ್ಟಾಲಿನ್ ಮತ್ತೆ ತೊಡೆ ತಟ್ಟಿದ್ದಾರೆ. ಆಮೂಲಕ ಜೈಲಿನಿಂದ ಹೊರಬಂದಿರುವ ಸಸಿಕಲಾ ಹಾಗೂ ಜಯಲಲಿತಾ ನೇಪಥ್ಯದಲ್ಲಿ ಅಧಿಕಾರ ಅನುಭವಿಸಿದ್ದ ಪಳನಿಸ್ವಾಮಿಯನ್ನು ಕಟಕಟೆಯಲ್ಲಿ ನಿಲ್ಲಿಸಲು ತಯಾರಾಗಿದ್ದಾರೆ.
Located in the picturesque Nilgiris district, the Kodanad estate, which is spread across 906 acres and belonged to former Chief Minister J Jayalalithaa and her aide VK Sasikala, became a crime scene in 2017. Four months after Jayalalithaa’s demise and two months after Sasikala’s incarceration, the Kodanad estate, which had once served as their summer getaway, witnessed a break-in and murder in the wee hours of April 24, 2017. Four years after a string of mysterious incidents surrounding the estate, which served as Jayalalithaa’s second office, it has once again become the center of a heated political row.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm