ಐಎನ್ಎಸ್ ವಿಕ್ರಾಂತ್ ನೌಕೆ ಸ್ಫೋಟಿಸುವ ಬೆದರಿಕೆ ; ಅಫ್ಘನ್ ಪ್ರಜೆ ಬಂಧನ ಬೆನ್ನಲ್ಲೇ ಅನಾಮಧೇಯ ಇಮೇಲ್

07-09-21 02:20 pm       Headline Karnataka News Network   ಕ್ರೈಂ

ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿರುವ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಅನಾಮಧೇಯರಿಂದ ಇ-ಮೇಲ್ ಸಂದೇಶ ಬಂದಿದೆ.

ಕೊಚ್ಚಿ, ಸೆ.7: ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿರುವ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಅನಾಮಧೇಯರಿಂದ ಇ-ಮೇಲ್ ಸಂದೇಶ ಬಂದಿದ್ದು, ನೌಕಾನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಕಳೆದ 20 ದಿನಗಳಲ್ಲಿ ಶಿಪ್ ಯಾರ್ಡ್ ಅಧಿಕೃತ ಮೇಲ್ ಗೆ ಎರಡನೇ ಬಾರಿ ಈ ರೀತಿ ಬೆದರಿಕೆ ಸಂದೇಶ ಬಂದಿದ್ದು ಈ ಬಗ್ಗೆ ಎರ್ನಾಕುಲಂ ಪೊಲೀಸರು ಸೈಬರ್ ಅಪರಾಧದಡಿ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ, ನೌಕಾನೆಲೆಯಲ್ಲಿ ಕರಾವಳಿ ಕಾವಲು ಪಡೆ ಸೇರಿದಂತೆ ವಿವಿಧ ಕೇಂದ್ರೀಯ ಏಜನ್ಸಿಗಳು ತಪಾಸಣೆಯಲ್ಲಿ ತೊಡಗಿವೆ.

ಕಳೆದ ಜುಲೈ ತಿಂಗಳಲ್ಲಿ ಶಿಪ್ ಯಾರ್ಡ್ ನಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಅಫ್ಘಾನಿಸ್ತಾನ ಮೂಲದ ಈದ್ ಗುಲ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ವೀಸಾ ಅವಧಿ ಮುಗಿದರೂ, ಪೋರ್ಜರಿ ಮಾಡಿದ್ದ ದಾಖಲೆ ಇಟ್ಟುಕೊಂಡು ಶಿಪ್ ಯಾರ್ಡ್ ನಲ್ಲಿ ಉಳಿದುಕೊಂಡಿರುವ ಬಗ್ಗೆ ಅಲ್ಲಿನ ಅಧಿಕಾರಿಗಳು ಎಚ್ಚತ್ತುಕೊಂಡ ಕೂಡಲೇ ಈದ್ ಗುಲ್ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗಿದ್ದ. ಆನಂತರ ಎನ್ಐಎ ಅಧಿಕಾರಿಗಳು ಆತನ ಹಿಂದೆ ಬಿದ್ದು ಕೊಲ್ಕತ್ತಾದಲ್ಲಿ ಬಂಧಿಸಿದ್ದರು. ಆತನ ಬಂಧನದ ಬೆನ್ನಲ್ಲೇ ಆಗಸ್ಟ್ ತಿಂಗಳಲ್ಲಿ ಎರಡು ಬಾರಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ಅಫ್ಘಾನಿಸ್ತಾನದ ಪ್ರಜೆಯ ಬಂಧನಕ್ಕೂ ಈ ರೀತಿಯ ಇಮೇಲ್ ಬೆದರಿಕೆಗೂ ಸಂಬಂಧ ಇದೆಯಾ ಅನ್ನೋದ್ರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದಕ್ಕೂ ಮುನ್ನ 2019ರಲ್ಲಿ ಶಿಪ್ ಯಾರ್ಡ್ ನಲ್ಲಿ ಪೈಂಟಿಂಗ್ ಕಾರ್ಮಿಕರಾಗಿ ಬಂದಿದ್ದ ಬಿಹಾರ ಮತ್ತು ರಾಜಸ್ಥಾನ ಮೂಲದ ಇಬ್ಬರು ಇಲೆಕ್ಟ್ರೋನಿಕ್ ಉಪಕರಣ ಒಂದನ್ನು ಐಎನ್ಎಸ್ ವಿಕ್ರಾಂತ್ ನೌಕೆಯ ಒಳಗೆ ಇರಿಸಿದ್ದು ಕಂಡುಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಎನ್ಐಎ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ಪಡೆದಿದ್ದರು.

12 ವರ್ಷಗಳ ಸತತ ಪ್ರಯತ್ನದಿಂದಾಗಿ ಐಎನ್ಎಸ್ ವಿಕ್ರಾಂತ್ ಹೆಸರಿನ ಬೃಹತ್ ನೌಕೆಯನ್ನು ಭಾರತೀಯ ನೌಕಾಪಡೆ ನಿರ್ಮಿಸಿದ್ದು, ತಿಂಗಳ ಹಿಂದಷ್ಟೇ ಅದನ್ನು ಸಮುದ್ರ ಮಧ್ಯದಲ್ಲಿ ಯಶಸ್ವಿಯಾಗಿ ಟ್ರಯಲ್ ನಡೆಸಲಾಗಿತ್ತು. ಈ ನೌಕೆಗೆ ಸುಮಾರು 23 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. 

The police have registered cases under cyber terrorism after Cochin Shipyard received e-mails twice in the past 20 days, warning of bombs going off in the shipyard where the indigenous aircraft carrier (IAC) that will be christened INS Vikrant and is undergoing sea trials, was built.