6 ಕೋಟಿ ಮೌಲ್ಯದ ಮೊಬೈಲ್ ತುಂಬಿದ್ದ ಲಾರಿ ದರೋಡೆ ; ಮಧ್ಯಪ್ರದೇಶದಲ್ಲಿ ಒಬ್ಬನ ಸೆರೆ

15-09-21 05:33 pm       Headline Karnataka News Network   ಕ್ರೈಂ

ಆರು ಕೋಟಿ ಮೌಲ್ಯದ ಎಂಐ ಕಂಪನಿಯ ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಓರ್ವ ಆರೋಪಿಯನ್ನ ಕೋಲಾರ ಪೊಲೀಸರು ಬಂಧಿಸಿದ್ದಾರೆ.

ಕೋಲಾರ, ಸೆ.15 : ಆರು ಕೋಟಿ ಮೌಲ್ಯದ ಎಂಐ ಕಂಪನಿಯ ಮೊಬೈಲ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಓರ್ವ ಆರೋಪಿಯನ್ನ ಕೋಲಾರ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯ ಸಮುದ್ರ ಬಳಿ ಆಗಸ್ಟ್ 6ರಂದು ಚೆನ್ನೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಮೊಬೈಲ್ ತುಂಬಿದ್ದ ಕಂಟೇನರ್ ದರೋಡೆ ಮಾಡಲಾಗಿತ್ತು.

ತಮಿಳುನಾಡಿನ ಕಾಂಚೀಪುರಂನಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿಯನ್ನ ರಾಷ್ಟ್ರೀಯ ಹೆದ್ದಾರಿ-75ರ ದೇವರಾಯ ಸಮುದ್ರದ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು, ಚಾಲಕನನ್ನ ಕಟ್ಟಿಹಾಕಿ, ಥಳಿಸಿ ಬಾಯಿಗೆ ಬಟ್ಟೆ ಇಟ್ಟು, ಲಾರಿ ಸಮೇತ ಪರಾರಿಯಾಗಿದ್ದರು.

ನಂತರ ಅದೇ ಹೆದ್ದಾರಿಯ ನೆರ್ನಹಳ್ಳಿ ಗೇಟ್ ಬಳಿ ಕಂಟೇನರ್ ನಿಲ್ಲಿಸಿ, ಬೇರೊಂದು ಲಾರಿಯಲ್ಲಿ ಮೊಬೈಲ್​​ ತುಂಬಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌.

ಪ್ರಕರಣದ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಕುಮಾರ್ ನೇತೃತ್ವದಲ್ಲಿ ನಾಲ್ಕು ಪೊಲೀಸ್ ತಂಡಗಳನ್ನ ರಚನೆ ಮಾಡಲಾಗಿತ್ತು. ಕಾರ್ಯಾಚರಣೆ ನಡೆಸಿದ ಪೊಲೀಸರು ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಓರ್ವ ಆರೋಪಿಯನ್ನ ಬಂಧಿಸಿದ್ದಾರೆ.  ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳ ಪತ್ತೆಗೂ ಬಲೆ ಬೀಸಿದ್ದಾರೆ.