ಪಾಕಿಸ್ಥಾನದ ಐಎಸ್ಐ ಲಿಂಕ್ ; ಮುಂಬೈ, ಯುಪಿಯಲ್ಲಿ ಮತ್ತಿಬ್ಬರು ಶಂಕಿತ ಉಗ್ರರು ಸೆರೆ

18-09-21 01:06 pm       Headline Karnataka News Network   ಕ್ರೈಂ

ದೆಹಲಿ ಪೊಲೀಸರು ಉಗ್ರರ ಜಾಡು ಹಿಡಿದು ಕಾರ್ಯಾಚರಣೆ ನಡೆಸುತ್ತಿರುವಾಗಲೇ ಮುಂಬೈ ಮತ್ತು ಅಲಹಾಬಾದ್ ನಲ್ಲಿ ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ನೋ, ಸೆ.18 : ದೆಹಲಿ ಪೊಲೀಸರು ಉಗ್ರರ ಜಾಡು ಹಿಡಿದು ಕಾರ್ಯಾಚರಣೆ ನಡೆಸುತ್ತಿರುವಾಗಲೇ ಮುಂಬೈ ಮತ್ತು ಅಲಹಾಬಾದ್ ನಲ್ಲಿ ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ಹೈಮದ್ ಉರ್ ರೆಹ್ಮಾನ್ ಎಂಬಾತ ಪೊಲೀಸರಿಗೆ ಶರಣಾಗಿದ್ದರೆ, ಮುಂಬೈ ಪೊಲೀಸರು ದಾವೂದ್ ಕಂಪನಿಯ ಸಂಪರ್ಕದ ಹೊಂದಿದ್ದ ಝಕೀರ್ ಹುಸೇನ್ ಶೇಖ್ ಎಂಬಾತನನ್ನು ಬಂಧಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಪಾಕಿಸ್ಥಾನದ ಐಎಸ್ಐ ಲಿಂಕ್ ಆರೋಪದಲ್ಲಿ ಬಂಧಿತನಾಗಿದ್ದ ಜಾಮಿಯಾ ನಗರ್ ನಿವಾಸಿ ಒಸಾಮಾ ಸಮಿ(22) ಸೋದರ ಸಂಬಂಧಿಯಾಗಿರುವ ಹೈಮದ್ ಉರ್ ರೆಹ್ಮಾನ್ ಉಗ್ರರ ನಂಟಿನ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿರುವಾಗಲೇ ಶುಕ್ರವಾರ ಆತ ಪ್ರಯಾಗ್ ರಾಜ್ ಜಿಲ್ಲೆಯ ಕರೇಲಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.

ದೆಹಲಿ ವಿಶೇಷ ಪಡೆ ಪೊಲೀಸರು ಮತ್ತು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ದೇಶಾದ್ಯಂತ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರು ಮಂದಿಯನ್ನು ಬಂಧಿಸಿದ್ದರು. ಪಾಕಿಸ್ಥಾನದ ಐಎಸ್ಐ ಸಂಪರ್ಕದಲ್ಲಿ ಈ ಆರು ಮಂದಿಯೂ ದೇಶದಲ್ಲಿ ಉಗ್ರವಾದಿ ಕೃತ್ಯಕ್ಕೆ ಮುಂದಾಗಿದ್ದರು. ಅದಕ್ಕಾಗಿ ಪಾಕಿಸ್ಥಾನದ ಕರಾಚಿಯಲ್ಲಿ ತರಬೇತಿಯನ್ನೂ ಪಡೆದಿದ್ದರು.

ಪೊಲೀಸರ ವಿಚಾರಣೆಯಲ್ಲಿ ಒಸಾಮಾ, ಮಸ್ಕತ್ ಮೂಲಕ ಪಾಕಿಸ್ಥಾನಕ್ಕೆ ತೆರಳಲು ತನ್ನ ಮಾವ ಹೈಮದ್ ಉರ್ ರೆಹ್ಮಾನ್ ನೆರವು ನೀಡಿದ್ದ. ಆತ ಪಾಕಿಸ್ಥಾನದ ಐಎಸ್ಐ ಜೊತೆಗೆ ನೇರ ಸಂಪರ್ಕದಲ್ಲಿದ್ದು, ಈ ವ್ಯವಸ್ಥೆಯನ್ನು ಮಾಡಿದ್ದ ಎಂದು ಮಾಹಿತಿ ನೀಡಿದ್ದ. ಅಲ್ಲದೆ, ಮಸ್ಕತ್, ಒಮಾನ್ ಮೂಲಕ ಪಾಕಿಸ್ಥಾನಕ್ಕೆ ಪ್ರಯಾಣಿಸಲು ಮಾವನೇ 5 ಲಕ್ಷ ರೂಪಾಯಿ ಫಂಡಿಂಗ್ ಮಾಡಿದ್ದ. ಭಾರತದಲ್ಲಿ 1993ರ ಮುಂಬೈ ಸರಣಿ ಬಾಂಬ್ ಬ್ಲಾಸ್ಟ್ ಮಾದರಿಯಲ್ಲೇ ವಿವಿಧ ನಗರಗಳಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ಮಾಡಲಾಗಿತ್ತು. ಅದಕ್ಕೆ ಬೇಕಾದ ಸ್ಫೋಟಕಗಳನ್ನು ಪಾಕಿಸ್ಥಾನದ ಐಎಸ್ಐ ನೀಡುವುದಾಗಿ ಹೇಳಿತ್ತು ಎಂದು ವಿಚಾರಣೆ ವೇಳೆ ಹೇಳಿದ್ದ.

ಇದೇ ವೇಳೆ, ಬಂಧಿತರು ನೀಡಿರುವ ಮಾಹಿತಿ ಆಧರಿಸಿ ಪೊಲೀಸರು ಉತ್ತರ ಪ್ರದೇಶ ಸೇರಿದಂತೆ ವಿವಿಧ ಕಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ರಾಯ್ ಬರೇಲಿಯಲ್ಲಿ ಜಾಮಿಲ್ ಖತ್ರಿ ಮತ್ತು ಪ್ರತಾಪಗಢದಲ್ಲಿ ಇಮ್ತಿಯಾಜ್ ಆಲಿ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ, ಹೈಮದ್ ಉರ್ ರೆಹ್ಮಾನನ್ನು ದೆಹಲಿ ಪೊಲೀಸರು ಲಕ್ನೋಗೆ ಬಂದು ಅಲ್ಲಿಂದ ತಮ್ಮ ವಶಕ್ಕೆ ಪಡೆದಿದ್ದಾರೆ.

Two terrorist networks have been busted in Mumbai and Prayagraj. ATS and Crime Branch are investigating the case. Watch the video to know another big revelation over funding of arrested terrorists.