ಮೂಡುಬಿದ್ರೆ, ಮುಡಿಪಿನಿಂದ ವಿದೇಶಕ್ಕೆ ಸ್ಯಾಟಲೈಟ್ ಫೋನ್ ಸಂಪರ್ಕ ! ಉಗ್ರರ ಸ್ಲೀಪರ್ ಸೆಲ್ ಚಟುವಟಿಕೆ ಸಕ್ರಿಯ ಶಂಕೆ

09-10-21 05:26 pm       Mangalore Reporter   ಕ್ರೈಂ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೂಡುಬಿದ್ರೆ ಮತ್ತು ಮುಡಿಪು ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವ ಬಗ್ಗೆ ಲೊಕೇಶನ್ ಪತ್ತೆ ಮಾಡಲಾಗಿದೆ.

ಮಂಗಳೂರು, ಅ.9: ಕರಾವಳಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು ಮಾಡಿರುವುದನ್ನು ಕೇಂದ್ರ ಇಂಟೆಲಿಜನ್ಸಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಸ್ಯಾಟಲೈಟ್ ಫೋನ್ ಕನೆಕ್ಟ್ ಆಗಿದ್ದು, ಕರಾವಳಿಯಲ್ಲಿ ಭಯೋತ್ಪಾದಕರೇ ಈ ಕೃತ್ಯದಲ್ಲಿ ತೊಡಗಿದ್ದಾರೆ ಎನ್ನುವ ಸಂಶಯ ಮೂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೂಡುಬಿದ್ರೆ ಮತ್ತು ಮುಡಿಪು ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವ ಬಗ್ಗೆ ಲೊಕೇಶನ್ ಪತ್ತೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಎರಡು ಕಡೆಯಿಂದ ವಿದೇಶಕ್ಕೆ ಫೋನ್ ಸಂಪರ್ಕ ಆಗಿರುವುದನ್ನು ಐಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಸಂದೇಶ ಕಳುಹಿಸಲಾಗಿದ್ದು, ಸರಕಾರಿ ಏಜನ್ಸಿಗಳಿಗೆ ಚಳ್ಳೆಹಣ್ಣು ತಿನ್ನಿಸುವ ಕಳ್ಳರ ಜಾಡು ತಲೆನೋವಿಗೆ ಕಾರಣವಾಗಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಐದು ಕಡೆಯಿಂದ ವಿದೇಶಗಳಿಗೆ ಸ್ಯಾಟಲೈಟ್ ಫೋನ್ ಕನೆಕ್ಟ್ ಆಗಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಹೀಗಾಗಿ ಕರಾವಳಿ ಜಿಲ್ಲೆಗಳಲ್ಲಿ ದೇಶದ್ರೋಹಿ ಚಟುವಟಿಕೆ ನಿರತರು ಸಕ್ರಿಯರಾಗಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ. ದೇಶಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಪಾಕಿಸ್ಥಾನದ ಐಎಸ್ಐ ಸಂಚು ರೂಪಿಸಿದ್ದು ಇತ್ತೀಚೆಗಷ್ಟೆ ಬಯಲಾಗಿತ್ತು. ಪ್ರಕರಣ ಸಂಬಂಧಿಸಿ ದೆಹಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿ, ಹಲವರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ, ದೇಶದ್ರೋಹಿ ಚಟುವಟಿಕೆಗೆ ಸಂಚು ಹೂಡಿದ್ದ ವಿಚಾರಗಳು ಪತ್ತೆಯಾಗಿದ್ದವು.

ಕಳೆದ ಆರು ತಿಂಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಸಂಪರ್ಕ ಪತ್ತೆಯಾಗಿದ್ದು ಇದು ನಾಲ್ಕನೇ ಬಾರಿ. ಸ್ಯಾಟಲೈಟ್ ಫೋನ್ ಸಂಪರ್ಕದ ವಿಚಾರ ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿಯೂ ಸದ್ದು ಮಾಡಿತ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ಈ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕಳೆದ 2020ರ ಬಳಿಕ 476 ಸ್ಯಾಟಲೈಟ್ ಫೋನ್ ಕರೆಗಳನ್ನು ಪತ್ತೆ ಮಾಡಲಾಗಿದೆ ಎನ್ನುವುದನ್ನು ತಿಳಿಸಿದ್ದರು. ಅಲ್ಲದೆ, 2020ರಲ್ಲಿ 256 ಬಾರಿ ಮತ್ತು ಈ ವರ್ಷ ಈವರೆಗೆ 220 ಬಾರಿ ಸ್ಯಾಟಲೈಟ್ ಫೋನ್ ಕನೆಕ್ಟ್ ಆಗಿದ್ದು ನಿಗೂಢ ಚಟುವಟಿಕೆ ನಿರತರಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಕರಾವಳಿಯಲ್ಲಿ ಉಗ್ರರ ಈ ಹಿಂದಿನ ಸ್ಲೀಪರ್ ಸೆಲ್ ಮತ್ತೆ ಏಕ್ಟಿವ್ ಆಗಿರುವ ಬಗ್ಗೆ ಪ್ರಬಲ ಶಂಕೆ ವ್ಯಕ್ತವಾಗಿದೆ.

ಮಂಗಳೂರು ಮತ್ತು ಭಟ್ಕಳದಲ್ಲಿ ಎರಡು ತಿಂಗಳ ಹಿಂದೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ, ಐಸಿಸ್ ಪ್ರೇರಿತ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಆನಂತರ, ಕರಾವಳಿಯಲ್ಲಿ ನಿಷೇಧಿತ ಚಟುವಟಿಕೆಗಳು ಮತ್ತಷ್ಟು ನಿಗೂಢವಾಗಿದ್ದಲ್ಲದೆ, ಸಕ್ರಿಯ ಆಗಿರುವುದನ್ನು ಸ್ಯಾಟಲೈಟ್ ಫೋನ್ ಮೂಲಕ ವಿದೇಶಗಳಿಗೆ ಕರೆ ಹೋಗುತ್ತಿರುವುದು ನಿರೂಪಿಸಿದೆ. 

The intelligence agencies have alerted the Karnataka government after they tracked satellite phone calls made to foreign locations from the coastal area and Malnad region of the state, sources said on Saturday. The phone calls are being tracked to Mudibidre, Mudipu regions in Dakshina Kannada, in dense forest regions of Uttara Kannada and another two locations from Chikkamagaluru district in the state.