ಉಳ್ಳಾಲದಲ್ಲಿ ಒಂಟಿ ಮನೆಗಳೇ ಟಾರ್ಗೆಟ್ ; ಮತ್ತೆರಡು ಕಳ್ಳತನ ಯತ್ನ ಬೆಳಕಿಗೆ, ಸಿಸಿಟಿವಿ ಡಿವಿಆರ್ ಕದ್ದೊಯ್ದ ಖದೀಮರು !

09-10-21 09:50 pm       Mangalore Reporter   ಕ್ರೈಂ

ಕುತ್ತಾರಿನ ಎರಡು ಒಂಟಿ ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದು ಅಲ್ಲಿನ ಸಿಸಿಟಿವಿ ಡಿವಿಆರ್ ಕದ್ದೊಯ್ದಿದ್ದಾರೆ.

ಉಳ್ಳಾಲ, ಅ.9 : ಎರಡು ದಿನಗಳ ಹಿಂದೆ ಬಬ್ಬುಕಟ್ಟೆ ಚಂದಪ್ಪ ಎಸ್ಟೇಟಿನ ಒಂಟಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಬೆಳೆಬಾಳುವ ದೀಪಗಳನ್ನ ಕದ್ದೊಯ್ದ ಪ್ರಕರಣದ ಬೆನ್ನಲ್ಲೇ ಕುತ್ತಾರಿನ ಎರಡು ಒಂಟಿ ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದು ಅಲ್ಲಿನ ಸಿಸಿಟಿವಿ ಡಿವಿಆರ್ ಕದ್ದೊಯ್ದ ಪ್ರಕರಣ ಬೆಳಕಿಗೆ ಬಂದಿದೆ. 

ಬಬ್ಬುಕಟ್ಟೆಯ ಚಂದಪ್ಪ ಎಸ್ಟೇಟ್ ನಲ್ಲಿರುವ ಸುಜಾತ ಎಂಬವರಿಗೆ ಸೇರಿದ ಒಂಟಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಬೆಳೆ ಬಾಳುವ ಐದು ಹಿತ್ತಳೆ ದೀಪಗಳನ್ನ ಕದ್ದೊಯ್ದ ಪ್ರಕರಣ ಬುಧವಾರ ಬೆಳಕಿಗೆ ಬಂದಿತ್ತು. ಇಂದು ಸಂಜೆ ಕುತ್ತಾರು ಆದಿ ಸ್ಥಳ ಕೊರಗಜ್ಜನ ಕಟ್ಟೆಯ ಬಳಿಯ ವೈದ್ಯೆ ಝೀಟಾ ಎಂಬವರ ವಾಸ್ತವ್ಯವಿಲ್ಲದ ಒಂಟಿ ಮನೆಗೆ ನುಗ್ಗಿದ ಕಳ್ಳರು ಮನೆಯೆಲ್ಲ ತಡಕಾಡಿದ್ದು ಏನೂ ಸಿಗದೆ ಕೊನೆಗೆ ತಮ್ಮ ಚಹರೆ ಪತ್ತೆ ಸಿಗದಂತೆ ಸಿಸಿಟಿವಿ ಡಿವಿಆರನ್ನೇ ಕಳಚಿ ಕದ್ದೊಯ್ದಿದ್ದಾರೆ. ಝೀಟಾ ಅವರ ನೆರೆಮನೆಯ ದಿ.ರವೀಂದ್ರ ಕೊಟ್ಟಾರಿ ಅವರ ಒಂಟಿ ಮನೆಗೂ ನುಗ್ಗಿದ ಕಳ್ಳರು ಮನೆಯೆಲ್ಲಾ ತಡಕಾಡಿ ಏನೂ ಸಿಗದೆ ಬರಿಗೈಯಲ್ಲಿ ತೆರಳಿದ ಪ್ರಕರಣ ಕಳೆದ ಬುಧವಾರ ಸಂಜೆ ತಿಳಿದುಬಂದಿತ್ತು. ರವೀಂದ್ರ ಕೊಟ್ಟಾರಿ ಅವರ ಒಂಟಿ ಮನೆಗೆ ನುಗ್ಗಿದ್ದ ಕಳ್ಳರು ಕಬಾಟನ್ನು ತಡಕಾಡಿದ್ದು ಅದರಲ್ಲಿದ್ದ ಬಟ್ಟೆ , ಪೇಪರನ್ನ ಸುಟ್ಟು ಹೋಗಿದ್ದರು. ಒಂಟಿ ಮನೆಯಲ್ಲಿ ಕಳ್ಳತನ ನಡೆದಿರುವ ಕುರಿತು ಬುಧವಾರ ಸಂಜೆ ನರೆಮನೆಯವರ ಗಮನಕ್ಕೆ ಬಂದಿತ್ತು.

ಇಂದು ಸಂಜೆ ಕುತ್ತಾರು ಅಜ್ಜನ ಕಟ್ಟೆಯ ಬಳಿಯ ನಿವಾಸಿ ವೈದ್ಯೆ ಝೀಟಾ ಅವರ ಒಂಟಿ ಮನೆಯಲ್ಲೂ ಕಳ್ಳರು ನುಗ್ಗಿ ಕಪಾಟನ್ನ ತಡಕಾಡಿದ್ದು ತಮ್ಮ ಮುಖ ಪರಿಚಯ ಸಿಗಬಾರದೆಂದು ಮನೆಗೆ ಅಳವಡಿಸಿದ್ದ ಸಿಸಿಟಿವಿಯ ಡಿವಿಆರನ್ನೇ ಕದ್ದೊಯ್ದಿದ್ದಾರೆ. ಝೀಟಾ ಅವರ ಮಗ ಯೆನಪೋಯ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದು ಮಂಗಳೂರಲ್ಲೇ ವಾಸವಾಗಿದ್ದರು. ಬಹಳ ದಿನಗಳ ಬಳಿಕ ಇಂದು ಕುತ್ತಾರಿನ ಮನೆಗೆ ಬಂದಾಗ ಕಳ್ಳತನ ಯತ್ನ ತಿಳಿದುಬಂದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ನೆರೆ ಮನೆಯವರ ಸಿಸಿಟಿವಿ ಫೂಟೇಜನ್ನ ಪರಿಶೀಲನೆ ನಡೆಸಿದ್ದಾರೆ. 

ಒಂಟಿ ಮನೆಗಳೇ ಕಳ್ಳರ ಟಾರ್ಗೆಟ್ 

ಬಬ್ಬುಕಟ್ಟೆಯ ಚಂದಪ್ಪ ಎಸ್ಟೇಟ್ ನ ಒಂಟಿ ಬಂಗಲೆ ಮತ್ತು ಕುತ್ತಾರಿನ ಎರಡು ಒಂಟಿ ಮನೆಗಳಿಗೆ ಒಂದೇ ದಿವಸ ಕಳ್ಳರು ಕನ್ನ ಹಾಕಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಒಂಟಿ ಮನೆಗಳಲ್ಲಿ ಜನ ವಾಸ್ತವ್ಯ ಇಲ್ಲದೇ ಇರುವುದರಿಂದ ಕಳ್ಳತನ ಯಾವತ್ತು ನಡೆದಿದೆ ಎಂಬುದಕ್ಕೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.

Mangalore Isolated big houses are target for Burglars in Ullal other two robbery case are found. Recently burglars entered a bunglow and had robbed brass lamps worth of lakhs.