ಮೂಡುಬಿದ್ರೆಯಲ್ಲೂ ನೈತಿಕ ಪೊಲೀಸ್ ; ಪರಿಚಿತರ ಕಾರಿನಲ್ಲಿ ತೆರಳುತ್ತಿದ್ದ ಹಿಂದು ಯುವತಿಯರು, ಅಡ್ಡಗಟ್ಟಿ ನಿಂದಿಸಿದ ಹಿಂಜಾವೇ ಕಾರ್ಯಕರ್ತರ ಸೆರೆ  

10-10-21 08:13 am       Mangalore Reporter   ಕ್ರೈಂ

ಇಬ್ಬರು ಹಿಂದು ಯುವತಿಯರು ಮುಸ್ಲಿಮ್ ದಂಪತಿ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದುದನ್ನು ಗಮನಿಸಿದ ಹಿಂಜಾವೇ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ್ದಾರೆ.

ಮೂಡುಬಿದ್ರೆ, ಅ.10: ಮುಸ್ಲಿಮ್ ದಂಪತಿ ಜೊತೆ ಕಾರಿನಲ್ಲಿ ಇಬ್ಬರು ಹಿಂದು ಯುವತಿಯರು ಪ್ರಯಾಣಿಸುತ್ತಿದ್ದುದನ್ನು ಗಮನಿಸಿದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ ಘಟನೆ ನಡೆದಿದ್ದು, ಮತ್ತೊಂದು ನೈತಿಕ ಪೊಲೀಸ್ ಗಿರಿ ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮುಸ್ಲಿಮ್ ದಂಪತಿ ಬೆಳುವಾಯಿ ಕಡೆಯಿಂದ ಮೂಡುಬಿದ್ರೆ ಕಡೆಗೆ ಆಲ್ಟೋ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ, ಬೇರೆ ವಾಹನದಲ್ಲಿ ಹಿಂಬಾಲಿಸಿ ಬಂದ ಹಿಂದು ಸಂಘಟನೆಯ ಕಾರ್ಯಕರ್ತರು ಆಲ್ಟೋ ಕಾರನ್ನು ಕೆಸರ್ ಗದ್ದೆ ಎಂಬಲ್ಲಿ ಅಡ್ಡಹಾಕಿದ್ದಾರೆ. ಆನಂತರ, ಕಾರನ್ನು ನಿಲ್ಲಿಸಿ ಮುಸ್ಲಿಮ್ ದಂಪತಿ ಮತ್ತು ಅದರಲ್ಲಿದ್ದ ಇಬ್ಬರು ಹೆಣ್ಮಕ್ಕಳನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಮುಸ್ಲಿಂ ದಂಪತಿ ಪರಿಚಿತರಾಗಿದ್ದರಿಂದ ಯುವತಿಯರು ಅವರ ಜೊತೆ ಕಾರಿನಲ್ಲಿ ತೆರಳುತ್ತಿದ್ದರು.

ಪ್ರಕರಣದ ಬಗ್ಗೆ ಮೂಡುಬಿದ್ರೆ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹಿಂದು ಜಾಗರಣ ವೇದಿಕೆಯ ಮೂಡುಬಿದ್ರೆ ಘಟಕದ ಮುಖಂಡ ಸಮಿತ್ ರಾಜ್ ದರೆಗುಡ್ಡೆ ಮತ್ತು ಕಾರ್ಯಕರ್ತ ಸಂದೀಪ್ ಪೂಜಾರಿ ಬಂಧಿತರಾಗಿದ್ದು, ಅವರ ವಿರುದ್ಧ 354, 153 ಎ, 504, 506 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಕಾರಿನಲ್ಲಿದ್ದ ದಂಪತಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಕಾರ್ಕಳ ತಾಲೂಕಿಗೆ ಸೇರಿದವರಾಗಿದ್ದು, ಅವರೇ ದೂರು ನೀಡಿದ್ದರು. 

Moral Policing in Moodbidri Two Hindu girls stopped for travelling in car with Muslim Youths. Two Bajarang Dal members arrested for misbehaving with girls. Mangalore is reporting several back to back moral policing cases in two weeks.