ಅನುಶ್ರೀ ಪ್ರಕರಣ ; ಒತ್ತಡ ಹಾಕಿದ ಮಾಜಿ ಸಿಎಂ ಯಾರೆಂದು ಬಹಿರಂಗಪಡಿಸಿ, ಮಾಧ್ಯಮ ವರದಿಗಳ ಬಗ್ಗೆ ಎಚ್ ಡಿಕೆ ಗರಂ

03-10-20 07:51 pm       Bangalore Correspondent   ಕರ್ನಾಟಕ

ಇತ್ತೀಚೆಗೆ ಟಿವಿ ಆ್ಯಂಕರ್ ಅನುಶ್ರೀ ವಿಚಾರವಾಗಿ ಏನೇನೋ ಲಿಂಕ್ ಮಾಡಿ ವರದಿಗಳು ಬರುತ್ತಿವೆ.' ಮಾಜಿ ಸಿಎಂ' ಒತ್ತಡ ಹಾಕಿದ್ದಾರೆ ಎಂದು ಸುದ್ದಿ ಪ್ರಸಾರ ಆಗಿದೆ. ಆ ಮಾಜಿ ಸಿಎಂ ಯಾರು ಎಂದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಹೆಚ್. ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. 

ಬೆಂಗಳೂರು, ಅಕ್ಟೋಬರ್ 3: ನಿರೂಪಕಿ, ನಟಿ ಅನುಶ್ರೀ ಪ್ರಕರಣದಲ್ಲಿ 'ಮಾಜಿ ಸಿಎಂ' ಒತ್ತಡ ಹಾಕಿದ್ದಾರೆ ಎಂದು ಸುದ್ದಿ ಪ್ರಸಾರ ಆಗಿದೆ. ಆ ಮಾಜಿ ಸಿಎಂ ಯಾರು ಎಂದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಹೆಚ್. ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. 

ಬೆಂಗಳೂರಿನಲ್ಲಿ ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಿನಕ್ಕೊಂದು ಕಪೋಲಕಲ್ಪಿತ ವರದಿಗಳು ಬರುತ್ತಿವೆ. ಇತ್ತೀಚೆಗೆ ಟಿವಿ ಆ್ಯಂಕರ್ ಅನುಶ್ರೀ ವಿಚಾರವಾಗಿ ಏನೇನೋ ಲಿಂಕ್ ಮಾಡಿ ವರದಿಗಳು ಬರುತ್ತಿವೆ. ಮಂಗಳೂರು ಸಿಸಿಬಿ ನೋಟಿಸ್ ನೀಡಿದ ತಕ್ಷಣ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಒತ್ತಡ ತರಲು ಆ ಹೆಣ್ಣು ಮಗಳು ಫೋನ್ ಮಾಡಿದ್ದಾರೆಂದು ಸುದ್ದಿ ಪ್ರಸಾರ ಆಗಿದೆ. ಸಿಸಿಬಿ ಅಧಿಕಾರಿಗಳಿಗೆ ಮೂವರು ಪ್ರಭಾವಿಗಳ ನಂಬರ್ ಸಿಕ್ಕಿದೆ ಅಂತೆ. ಅವರ ಕಾಲ್ ಲಿಸ್ಟ್‌ನಲ್ಲಿ ಪ್ರಭಾವಿ ನಾಯಕರ ನಂಬರ್ ನೋಡಿ ಸಿಸಿಬಿ ಪೊಲೀಸ್ ಶಾಕ್ ಆಗಿದ್ದಾರಂತೆ ಎಂದು ವರದಿಯನ್ನು ನೋಡಿದ್ದೇನೆ. ಇದರಿಂದ ನನಗೂ ಶಾಕ್ ಆಗಿದೆ ಎಂದರು.

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದು ನಾನು. ಮಾಜಿ ಮುಖ್ಯಮಂತ್ರಿಗಳಲ್ಲಿ ನಾನು, ಸಿದ್ದರಾಮಯ್ಯ, ಎಸ್.ಎಂ.ಕೃಷ್ಣ, ಮೊಯ್ಲಿ, ಜಗದೀಶ್ ಶೆಟ್ಟರ್, ಡಿವಿಎಸ್ ಇನ್ನೂ ಇದ್ದೇವೆ. ಯಾವ ಅಧಿಕಾರಿ ಮಾಜಿ ಸಿಎಂ ಅಂತ ಮಾಹಿತಿ ಕೊಟ್ಟಿದ್ದಾರೆ. ಯಾವ ಆಧಾರದ ಮೇರೆಗೆ ಮಾಜಿ ಮುಖ್ಯಮಂತ್ರಿ ಹೆಸರು ಬಂದಿದೆ. ಯಾರು ಆ ಮಾಜಿ ಸಿಎಂ ಹೇಳಬೇಕು ಎಂದು ಬಹಿರಂಗ ಆಗಬೇಕು ಎಂದು ಕುಮಾರಸ್ವಾಮಿ ಹೇಳಿದರು. 

ಆ ಹೆಣ್ಣು ಮಗಳು ಮಾಜಿ ಸಿಎಂ ಜೊತೆ ಮಾತಾಡಿದ್ದರೆ ಸತ್ಯ ಗೊತ್ತಾಗಲಿ. ಯಾರು ಆ ಮಾಜಿ ಸಿಎಂ ಅಂತ ಸಾರ್ವಜನಿಕವಾಗಿ ಮೊದಲು ಜನರ ಮುಂದೆ ಇಡಲಿ. ಯಾವ ಮಾಜಿ ಸಿಎಂ ಮಗನ ಹೆಸರು ಇದೆ ಗೊತ್ತಾಗಲಿ. ನಾನು ಯಾರು ಈ ವರದಿ ಕೊಟ್ಟಿದ್ದಾರೋ ಆ ವರದಿಗಾರರ ಬಳಿ ತಿಳಿದುಕೊಂಡಿದ್ದೇನೆ. ಒಂದು ನಂಬರ್‌ನಿಂದ ಮಾಹಿತಿ ಕೊಟ್ಟಿದ್ದಾಗಿ ನನಗೆ ವರದಿಗಾರ ಫೋನ್ ನಂಬರ್ ಕೊಟ್ಟಿದ್ದಾರೆ. ಆ ನಂಬರ್ ಯಾರದು ಎಂದು ಪರಿಶೀಲಿಸಿದೆ. ಇದು ಸಿಸಿಬಿಯ ಶಿವಪ್ರಕಾಶ್ ನಾಯಕ್ ಬಳಸುತ್ತಿದ್ದ ನಂಬರ್ ಆಗಿದೆ. ಹೀಗಾಗಿ ಇದರ ಬಗ್ಗೆ ಅಧಿಕಾರಿ ಶಿವಪ್ರಕಾಶ್ ನಾಯಕ್ ಸತ್ಯ ಹೇಳಬೇಕು. ಮಾಹಿತಿ ಕೊಟ್ಟಿರೋದು ಸತ್ಯನಾ ಅನ್ನೋದನ್ನ ಹೇಳಲಿ ಎಂದರು.

ಯಾವ ಮಾಜಿ ಸಿಎಂ ಅಂತ ಜನರು ತಿಳಿದುಕೊಳ್ಳಬೇಕು. ನಾನು ಸರ್ಕಾರಕ್ಕೆ, ಸಿಎಂಗೆ, ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಸತ್ಯಾಸತ್ಯತೆ ಏನು ಅನ್ನೋದು ಗೊತ್ತಾಗಬೇಕಿದೆ. ಯಾರು ಮಾಹಿತಿ ಕೊಟ್ಟಿದ್ದಾರೆ? ಯಾರು ಇದ್ದಾರೆ? ಯಾವ ಮಾಜಿ ಸಿಎಂ ಇದ್ದಾರೆ ಅನ್ನೋ ಸತ್ಯ ಗೊತ್ತಾಗಲಿ. ಆ ಮಾಜಿ ಮುಖ್ಯಮಂತ್ರಿ ಯಾರು ಎಂಬುದನ್ನು ಸರ್ಕಾರ ಹೊರ ತರಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಈ ರೀತಿಯ ಕಪೋಲಕಲ್ಪಿತ ವರದಿಗಳನ್ನು ಸುಮ್ಮನೆ ಬಿಡಬಾರದು. ನಾನಂತೂ ಇದನ್ನು ತನಿಖೆಗೆ ಒತ್ತಾಯ ಮಾಡುತ್ತೇನೆ. ನಾನು ಅಷ್ಟು ಸುಲಭಕ್ಕೆ ಬಿಡೋನು ಅಲ್ಲ. ಯಾರು ಒತ್ತಡ ಹಾಕಿದವರು ಅನ್ನೋದು ಗೊತ್ತಾಗಬೇಕು? ಒತ್ತಡ ಹಾಕಿದವನು ಯಾವನೇ ಆಗಿರಲಿ, ಅವನನ್ನ ಒದ್ದು ಒಳಗೆ ಹಾಕಲಿ. ಮಂಗಳೂರು ಕಮಿಷನರ್‌ಗೂ ನಾನು ಕರೆ ಮಾಡಿ ಮಾತಾಡಿದ್ದೇನೆ ಎಂದು ಎಚ್‍ಡಿಕೆ ಹೇಳಿದರು.