ಕರೋನಾ ಸೋಂಕಿತಳನ್ನೂ ಬಿಡದ ಕಾಮುಕ ಡಾಕ್ಟರ್

03-08-20 11:25 am       Bangalore Correspondent   ಕರ್ನಾಟಕ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರು ಕರೋನಾ ರೋಗಿಯ ಮೇಲೂ ಕಾಮದ ವಕ್ರ ದೃಷ್ಟಿ ಬೀರಿದ್ದಾರೆ. ಜುಲೈ 25ರಂದು ನಡೆದ ಈ ಘಟನೆ ಈಗ ಮುನ್ನೆಲೆಗೆ ಬಂದಿದೆ.

ಬೆಂಗಳೂರು : ಎಂಥಹ ಕಾಲ ಬಂದಿದೆ ನೋಡಿ, ವೈದ್ಯೋ ನಾರಾಯಣ ಅಂತ ಹೇಳ್ತೀವಿ. ಆದರೆ ಅವರೇ ಕಾಮುಕರಾದರೆ. ಹೌದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರೊಬ್ಬರು ಕರೋನಾ ರೋಗಿಯ ಮೇಲೂ ಕಾಮದ ವಕ್ರ ದೃಷ್ಟಿ ಬೀರಿದ್ದಾರೆ. ಜುಲೈ 25ರಂದು ನಡೆದ ಈ ಘಟನೆ ಈಗ ಮುನ್ನೆಲೆಗೆ ಬಂದಿದೆ.

ಕರೋನಾದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳಾ ರೋಗಿಗೆ ವೈದ್ಯರು ಲೈಂಗಿಕ ಕಿರುಕುಳ ನೀಡಿರುವುದಾಗಿ ವಿಕ್ಟೋರಿಯಾ ಆಸ್ಪತ್ರೆಯ ಅಧಿಕಾರಿಗಳೇ ವಿವಿ ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾತ್ರಿ ಹೊತ್ತು ರೋಗಿಯಿದ್ದ ವಾರ್ಡ್‍ಗೆ ಬಂದಿದ್ದ ವೈದ್ಯರು ಆಕೆಯ ಖಾಸಗಿ ಭಾಗಗಳನ್ನು ಮುಟ್ಟಿ, ಅಸಹಜವಾಗಿ ವರ್ತಿಸಿದ್ದರು ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.

ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‍ನಲ್ಲಿ ದಾಖಲಾಗಿದ್ದ ರೋಗಿ ತನಗಾದ ಕೆಟ್ಟ ಅನುಭವವನ್ನು ಅಲ್ಲಿನ ನೋಡಲ್ ಆಫೀಸರ್ ಬಳಿ ಹೇಳಿಕೊಂಡಿದ್ದರು. ನಂತರ ನೋಡಲ್ ಅಧಿಕಾರಿ ಈ ವಿಷಯವನ್ನು ವಿಕ್ಟೋರಿಯಾ ಆಸ್ಪತ್ರೆಯ ಆಡಳಿತ ಮಂಡಳಿಗೆ ತಿಳಿಸಿದ್ದರು. ಪೊಲೀಸರ ಪ್ರಕಾರ, ಆಸ್ಪತ್ರೆಯ ಅಧಿಕಾರಿಗಳು ಆ ಘಟನೆಯ ಬಗೆಗಾಗಲಿ ಅಥವಾ ಆರೋಪಿ ವೈದ್ಯರ ಬಗ್ಗೆಯಾಗಲಿ ಸಂಪೂರ್ಣ ಮಾಹಿತಿ ನೀಡಿಲ್ಲ.

ಈ ಘಟನೆಯ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಂತರಿಕ ತನಿಖೆ ನಡೆಸಲಾಗುತ್ತಿದೆ. ಅದಾದ ಬಳಿಕ ನಾಲ್ಕೈದು ದಿನಗಳಲ್ಲಿ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗುವುದು ಎಂದು ವಿಕ್ಟೋರಿಯಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಕರೋನಾ ಸೋಂಕಿತರಿಗೆ ಮೊದಲೇ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಇನ್ನು ಚಿಕಿತ್ಸೆ ಕೊಡುವ ಆಸ್ಪತ್ರೆಗಳಲ್ಲಿ ಇಂತಹ ಘಟನೆಗಳು ನಡೆದರೆ ಕರೋನಾ ಸೋಂಕಿತರು ಯಾವ ನಂಬಿಕೆಯ ಮೇಲೆ ಆಸ್ಪತ್ರೆಗೆ ದಾಖಲಾಗಬೇಕು ಅನ್ನೋದೇ ಈಗ ಯಕ್ಷ ಪ್ರಶ್ನೆ.