ಮಡಿಕೇರಿಯಲ್ಲಿ ಭಾರೀ ಮಳೆ ; ಜೋಡುಪಾಲ, ಸಂಪಾಜೆಯಲ್ಲಿ ಮತ್ತೆ ದುರಂತದ ಭೀತಿ 

05-08-22 12:20 pm       HK News Desk   ಕರ್ನಾಟಕ

ಮಡಿಕೇರಿ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ.‌ ಮಡಿಕೇರಿಯ ಚೆಂಬು, ಗಾಳಿಬೀಡು, ಜೋಡುಪಾಲ, ಸಂಪಾಜೆ ವ್ಯಾಪ್ತಿಯಲ್ಲಿ ಭಾರೀ ಮಳೆಯ ಕಾರಣ ಅಲ್ಲಿನ ನಿವಾಸಿಗಳು ಮತ್ತೆ ದುರಂತ ಮರುಕಳಿಸುತ್ತಾ ಎನ್ನುವ ಆತಂಕಕ್ಕೆ ಒಳಗಾಗಿದ್ದಾರೆ. 

ಮಡಿಕೇರಿ, ಆಗಸ್ಟ್ 5: ಮಡಿಕೇರಿ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ.‌ ಮಡಿಕೇರಿಯ ಚೆಂಬು, ಗಾಳಿಬೀಡು, ಜೋಡುಪಾಲ, ಸಂಪಾಜೆ ವ್ಯಾಪ್ತಿಯಲ್ಲಿ ಭಾರೀ ಮಳೆಯ ಕಾರಣ ಅಲ್ಲಿನ ನಿವಾಸಿಗಳು ಮತ್ತೆ ದುರಂತ ಮರುಕಳಿಸುತ್ತಾ ಎನ್ನುವ ಆತಂಕಕ್ಕೆ ಒಳಗಾಗಿದ್ದಾರೆ. 

ಮಳೆಯಿಂದಾಗಿ ಚೆಟ್ಟಿಮಾನಿ, ಮಾರ್ಪಡ್ಕ ಗ್ರಾಮಗಳಲ್ಲಿ ಸೇತುವೆಗಳು ಕೊಚ್ಚಿ ಹೋಗಿವೆ. ಸಂಪಾಜೆ, ಚೆಂಬು, ಕರಿಕೆ, ಕೊಯನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಹಲವೆಡೆ ರಸ್ತೆ ಕುಸಿದು ಹೋಗಿದೆ. ಚೆಂಬು, ಗೂನಡ್ಕ, ದಬ್ಬಡ್ಕ ಭಾಗದಲ್ಲಿ ಹೊಳೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕಲ್ಲುಗುಂಡಿ - ಚೆಟ್ಟಿಮಾನಿ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದೆ. ಸೇತುವೆ ಬಿರುಕು ಬಿಟ್ಟಿದ್ದರಿಂದ ಚೆಟ್ಟಿಮಾನಿಯ 60 ಕುಟುಂಬಗಳ ಜನರು ಸುಮಾರು 13 ಕಿಲೋ ಮೀಟರ್ ನಡೆದುಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಭಾಗಮಂಡಲ ಕರಿಕೆ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತವಾಗಿದೆ. ಭಾಗಮಂಡಲದಿಂದ 10 ಕಿಲೋ ಮೀಟರ್ ದೂರದಲ್ಲಿ ಭೂಕುಸಿತವಾಗಿದ್ದು ಗುರುವಾರ ಇಡೀ ದಿನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಬೆಟ್ಟದ ಮೇಲ್ಭಾಗದಲ್ಲಿ ಭಾರೀ ಭೂಕುಸಿತವಾಗಿದ್ದು, ಬೃಹತ್ ಗಾತ್ರದ ಬಂಡೆ, ಮರಗಳು ರಸ್ತೆಗೆ ಉರುಳಿದ್ದು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. 

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ.

Madikeri heavy rains sampaje people in great fear.