50 ಲಕ್ಷ ನಗದು ವಶಕ್ಕೆ, ಸಿಬಿಐನಿಂದ ಎಫ್ಐಆರ್ ದಾಖಲು ; ಡಿಕೆಶಿಗೆ ಆಪತ್ತು !

05-10-20 01:52 pm       Bangalore Correspondent   ಕರ್ನಾಟಕ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮತ್ತು ಆಸ್ತಿ - ಕಚೇರಿಗಳಿಗೆ ದಿಢೀರ್ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು 50 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು, ಅಕ್ಟೋಬರ್ 05: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮತ್ತು ಆಸ್ತಿ - ಕಚೇರಿಗಳಿಗೆ ದಿಢೀರ್ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು 50 ಲಕ್ಷ ನಗದನ್ನು ವಶಕ್ಕೆ ಪಡೆದಿದ್ದಾರೆ.

ಡಿಕೆಶಿಗೆ ಸಂಬಂಧಪಟ್ಟ ಕಚೇರಿ, ಆಸ್ತಿಗಳು ಇರುವಂತಹ ಕರ್ನಾಟಕ, ದೆಹಲಿ ಮತ್ತು ಮುಂಬೈನಲ್ಲಿ ಏಕಕಾಲದಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ದೊಡ್ಡಆಲಹಳ್ಳಿ, ಕನಕಪುರ ಮತ್ತು ಸದಾಶಿವನಗರ ಹೀಗೆ 9 ಕಡೆ ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್, ಡಿ.ಕೆ.ಸುರೇಶ್, ಆಪ್ತ ಸಚಿನ್ ನಾರಾಯಣ್ ಸೇರಿದಂತೆ ಹಲವರ ಮನೆ, ಕಚೇರಿಗಳಿಗೆ ದಾಳಿಯಾಗಿದೆ. ಈ ವೇಳೆ, 50 ಲಕ್ಷ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ.

ಇದೇ ವೇಳೆ, ಸಿಬಿಐ ಅಧಿಕಾರಿಗಳು ಬೆಂಗಳೂರಿನ ಕೇಂದ್ರದಲ್ಲಿ ಡಿಕೆಶಿ ಮತ್ತು ಆಪ್ತರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎನ್ನಲಾಗುತ್ತಿದೆ. ಇದಕ್ಕೂ ಮುನ್ನ ಸಿಬಿಐ ಅಧಿಕಾರಿಗಳು ಡಿಕೆಶಿ ಮತ್ತು ಆಪ್ತರ ವಿರುದ್ಧ ದಾಳಿ ನಡೆಸುವ ಬಗ್ಗೆ ರಾಜ್ಯ ಸರಕಾರದ ಅನುಮತಿ ಪಡೆದಿದ್ದರು. ದಾಳಿ ವೇಳೆ, ಭದ್ರತೆ ನೀಡುವಂತೆ ಕೇಳಿಕೊಂಡಿದ್ದರು. ಎಲ್ಲದಕ್ಕೂ ತಯಾರಿ ಮಾಡಿಕೊಂಡಿದ್ದ ಸಿಬಿಐ ಅಧಿಕಾರಿಗಳು, ಬೆಳ್ಳಂಬೆಳಗ್ಗೆ 5.30ರ ವೇಳೆಗೆ ಡಿಕೆಶಿಯ ಬೆಂಗಳೂರಿನ ಮನೆ ಮೇಲೆ ದಾಳಿ ನಡೆಸಿದ್ದರು.

ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಒಂದು ವರ್ಷದ ಹಿಂದೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರು ಮತ್ತು ದೆಹಲಿಯಲ್ಲಿ ದಾಳಿ ನಡೆಸಿದ್ದರು. 5 ಕೋಟಿಗೂ ಹೆಚ್ಚು ನಗದನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿತ್ತು. ಆನಂತರ ಡಿಕೆಶಿ ಪರ ವಕೀಲರು ಹೆಚ್ಚುವರಿ ದಾಳಿ ನಡೆಸದಂತೆ ಕೋರ್ಟಿನಿಂದ ಸ್ಟೇ ಪಡೆದಿದ್ದರು. ಆ ಬಳಿಕ ತಣ್ಣಗಾಗಿದ್ದ ಪ್ರಕರಣ ಇದೀಗ ದಿಢೀರ್ ಆಗಿ ಮತ್ತೆ ಮೇಲೆದ್ದುಕೊಂಡಿದೆ. ಹಳೇ ಪ್ರಕರಣ ಸಂಬಂಧಿಸಿಯೇ ಮತ್ತೆ ದಾಳಿ ನಡೆಸುತ್ತಿದ್ದಾರೆಯೇ ಅಥವಾ ಹೊಸ ಪ್ರಕರಣ ಏನಾದ್ರೂ ಇದೆಯೇ ಅನ್ನೋದು ತಿಳಿದುಬಂದಿಲ್ಲ.