ಆಂಧ್ರ ಸಿಎಂ ನಿಧಿಗೇ ಕನ್ನ ; ದ.ಕ. ಜಿಲ್ಲೆಯ ಐವರು ಅರೆಸ್ಟ್ – ಚೆಕ್ ಹಾಕಿ ಸಿಕ್ಕಿಬಿದ್ನಾ ಆರೋಪಿ ?

06-10-20 05:25 pm       Mangalore Correspondent   ಕರ್ನಾಟಕ

ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಗೇ ಕನ್ನ, ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಐವರು ಆಂಧ್ರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಅಕ್ಟೋಬರ್ 06: ಕೆಲವರು ಹಣಕ್ಕಾಗಿ ಎಷ್ಟೆಲ್ಲಾ ಖತರ್ನಾಕ್ ಐಡಿಯಾ ಮಾಡ್ತಾರೆ ಅಂದ್ರೆ ಯಾರೂ ಊಹಿಸೋದಕ್ಕೂ ಆಗಲ್ಲ. ಇಲ್ಲೊಂದು ಖದೀಮರ ತಂಡ ಸೇರಿ ಆಂಧ್ರಪ್ರದೇಶ ಸಿಎಂ ಪರಿಹಾರ ನಿಧಿಗೇ ಕನ್ನ ಹಾಕಿದ್ದಾರೆ. ಪರಿಹಾರ ನಿಧಿಯ ನಕಲಿ ಚೆಕ್ ಬಳಸಿ, ಬರೋಬ್ಬರಿ 117 ಕೋಟಿ ರೂಪಾಯಿ ಡ್ರಾ ಮಾಡಲು ಯೋಜನೆ ಹಾಕಿದ್ದ ಪ್ರಕರಣ ಬೆಳಕಿಗೆ ಬಂದಿದೆ. ದೇಶಾದ್ಯಂತ ಇರುವ ಈ ಜಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಐವರನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆಯ ಯೋಗೀಶ್ ಆಚಾರ್ಯ(40), ಕಾಂತಾವರ ನಿವಾಸಿ ಉದಯ ಶೆಟ್ಟಿ(35), ಮಂಗಳೂರಿನ ಬೃಜೇಶ್ ರೈ(35), ಬೆಳ್ತಂಗಡಿಯ ಗಂಗಾಧರ ಸುವರ್ಣ(45) ಸೇರಿ ಆರು ಮಂದಿಯನ್ನು ಆಂಧ್ರ ಪ್ರದೇಶದ ಎಸಿಬಿ ತಂಡ ಬಂಧಿಸಿ ಕರೆದೊಯ್ದಿದೆ. ಸಿಎಂ ಪರಿಹಾರ ನಿಧಿಗೆ ವಂಚನೆ ಆಗಿರುವ ಬಗ್ಗೆ ಆಂಧ್ರ ಪ್ರದೇಶದ ಕಂದಾಯ ಇಲಾಖೆಯ ಸಹಾಯಕ ಕಾರ್ಯದರ್ಶಿ ಪಿ.ಮುರಲೀಕೃಷ್ಣ ರಾವ್ ದೂರಿನಂತೆ ಪ್ರಕರಣ ದಾಖಲಾಗಿತ್ತು.

ಸಿಎಂ ಪರಿಹಾರ ನಿಧಿಯಿಂದ 2019 ಮತ್ತು 2020ರಲ್ಲಿ ನೀಡಿದ್ದ ಚೆಕ್, ಮಂಜೂರಾದ ಮೊತ್ತಗಳ ಬಗ್ಗೆ ತನಿಖೆ ನಡೆಸಿದಾಗ ವಂಚನೆ ಜಾಲ ಬಯಲಿಗೆ ಬಂದಿತ್ತು. ಕೂಡಲೇ ಪ್ರಕರಣದ ಬಗ್ಗೆ ಆಂಧ್ರ ಸಿಎಂ ಜಗನ್ ರೆಡ್ಡಿ ಎಸಿಬಿ ತನಿಖೆಗೆ ಆದೇಶ ಮಾಡಿದ್ದರು. ತನಿಖೆ ಸಂದರ್ಭದಲ್ಲಿ ರಾಜಧಾನಿ ದೆಹಲಿ, ಕೊಲ್ಕೊತ್ತಾ, ಬೆಂಗಳೂರು ಹೀಗೆ ದೇಶಾದ್ಯಂತ ಜಾಲ ಇರುವುದು ಪತ್ತೆಯಾಗಿದೆ.

52 ಕೋಟಿ ರೂ. ಚೆಕ್ ಹಾಕಿ ಸಿಕ್ಕಿಬಿದ್ದ !

ಮೂಡುಬಿದಿರೆಯ ಎಸ್ ಬಿಐ ಬ್ಯಾಂಕ್ ಕಚೇರಿಗೆ ಆರೋಪಿ ಯೋಗೀಶ್ ಆಚಾರ್ಯ 52 ಕೋಟಿ ರೂಪಾಯಿ ಮೊತ್ತದ ಚೆಕ್ಕನ್ನು ನಗದು ಮಾಡಿಕೊಳ್ಳಲು ಹಾಕಿದ್ದ. ಇದೇ ವೇಳೆ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಕರ್ನಾಟಕದಲ್ಲಿ ಎಸ್ ಬಿಐ ಕಚೇರಿಗೆ ಚೆಕ್ ಹಾಕಲಾಗಿತ್ತು. ಬ್ಯಾಂಕ್ ಅಧಿಕಾರಿಗಳು ಸಿಎಂ ಪರಿಹಾರ ನಿಧಿಯ ಸಿಬಂದಿಯನ್ನು ಸಂಪರ್ಕಿಸಿದಾಗ, ವಂಚನೆ ಜಾಲ ಬಯಲಾಗಿತ್ತು. ಕೂಡಲೇ ಪೊಲೀಸರು ಚೆಕ್ ತಡೆಹಿಡಿದಿದ್ದಾರೆ. ಮೂಡುಬಿದಿರೆ ಬ್ಯಾಂಕಿನಿಂದಲೂ ಹಣ ತಡೆಹಿಡಿದ ಎಸಿಬಿ ತಂಡ, ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಆದರೆ, ಕಳೆದ ಎರಡು ವರ್ಷಗಳಲ್ಲಿ ಇಂಥ ನಕಲಿ ಚೆಕ್ ಗಳನ್ನು ಬಳಸಿ ಕೋಟ್ಯಂತರ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ನಕಲಿ ಚೆಕ್ ಗಳಲ್ಲಿ ಕಂದಾಯ ಇಲಾಖೆಯ ಕಾರ್ಯದರ್ಶಿಯ ಸಹಿ ನಕಲು ಮಾಡಲಾಗಿತ್ತು. ಇತ್ತೀಚೆಗೆ ಮಿಜೋರಾಂ ಸಿಎಂ ಪರಿಹಾರ ನಿಧಿಯ ಹಣವನ್ನೂ ಇದೇ ರೀತಿ ಲಪಟಾಯಿಸಲು ಯತ್ನ ನಡೆದಿತ್ತು. ಮಂಗಳೂರಿನಲ್ಲಿ ಕಚೇರಿ ಇರುವ ಮುಂಬೈ ಮೂಲದ ಬ್ಯಾಂಕಿಗೆ 28 ಕೋಟಿ ರೂ. ಚೆಕ್ ಹಾಕಲಾಗಿತ್ತು. ಆದರೆ, ಖಾತೆಯಲ್ಲಿ ಅಷ್ಟು ಹಣ ಇಲ್ಲದೆ ಚೆಕ್ ಬೌನ್ಸ್ ಆಗಿತ್ತು.