ರಾಜ್ಯದಲ್ಲಿ ಕೊರೊನಾ ಟೆಸ್ಟ್ ಕಡ್ಡಾಯ ; ತಪ್ಪಿದ್ರೆ 3 ವರ್ಷ ಜೈಲು ಫಿಕ್ಸ್ !!

07-10-20 09:20 am       Headline Karnataka News Network   ಕರ್ನಾಟಕ

ಸರ್ಕಾ​ರ​ದಿಂದ ಗುರು​ತಿ​ಸ​ಲ್ಪ​ಡುವ ವ್ಯಕ್ತಿ​ಗಳು ಕೊರೊನಾ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿ​ಸಿ​ಕೊ​ಳ್ಳ​ಬೇಕು ಹಾಗೂ ಆದೇಶ ಪಾಲಿಸದವರಿಗೆ 50 ಸಾವಿರ ರು.ವರೆಗೆ ದಂಡ ಹಾಗೂ 6 ತಿಂಗಳಿಂದ 3 ವರ್ಷದವರೆಗೆ ಜೈಲು ಶಿಕ್ಷೆ

ಬೆಂಗಳೂರು, ಅಕ್ಟೋಬರ್ 07: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

ರಾಜ್ಯದಲ್ಲಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೆ ಕೊರೋನಾ ಸೋಂಕಿನ ಪರೀಕ್ಷೆ ಕಡ್ಡಾಯಗೊಳಿಸಲು ಆದೇಶಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಈ ಕುರಿತು ಆದೇಶ ಹೊರಡಿಸಲಾಗಿದ್ದು, ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಒಳಗಾದ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಸೇರಿದಂತೆ ಲಕ್ಷಣವಿರುವ ವ್ಯಕ್ತಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.

ಹೊಸ ಆದೇಶದಲ್ಲಿ ಯಾರೆಲ್ಲಾ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದ್ದು, ಉಸಿರಾಟ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವ ರೋಗಿಗಳು, ಕೊರೋನಾ ಚಿಕಿತ್ಸೆಯಲ್ಲಿ ತೊಡಗಿರುವ ಸಿಬ್ಬಂದಿ, ಆರೋಗ್ಯ ಸೇವಾ ಕ್ಷೇತ್ರದ ಕಾರ್ಯಕರ್ತರು, ಕಂಟೈನ್ ಮೆಂಟ್, ಬಫರ್ ವಲಯದಲ್ಲಿರುವ ವ್ಯಕ್ತಿಗಳು, ಆರೋಗ್ಯ ಸಿಬ್ಬಂದಿ ಗುರುತಿಸಲ್ಪಡುವ ಯಾವುದೇ ವ್ಯಕ್ತಿ ಅಥವಾ ಕೊರೋನಾ ಶಂಕಿತ ವ್ಯಕ್ತಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ .

ಈ ಆದೇಶವನ್ನು ಕರ್ನಾಟಕ ಸಾಂಕ್ರಾಮಿಕ ರೋಗಗಳ ಸುಗ್ರೀವಾಜ್ಞೆ - 2020ರ 4ನೇ ವಿಧಿಯಡಿ ಹೊರಡಿಸಲಾಗಿದ್ದು, ಆದೇಶ ಜಾರಿಯ ಹೊಣೆಯನ್ನು ಜಿಲ್ಲಾಧಿಕಾರಿಗಳು ಅಥವಾ ಮುನಿಸಿಪಲ್‌ ಕಮಿಷನರ್‌ ಅವರಿಗೆ ವಹಿಸಲಾಗಿದೆ. ಈ ಸುಗ್ರೀ​ವಾಜ್ಞೆ ಪ್ರಕಾರ, ಸರ್ಕಾರ ಸೂಚಿ​ಸಿ​ದರೂ ಕೊರೊನಾ ಟೆಸ್ಟ್‌ ಮಾಡಿ​ಸಿ​ಕೊ​ಳ್ಳ​ದ​ವ​ರಿಗೆ 50 ಸಾವಿರ ರು.ವರೆಗೆ ದಂಡ ಹಾಗೂ 6 ತಿಂಗಳಿಂದ 3 ವರ್ಷದವರೆಗೆ ಶಿಕ್ಷೆ ವಿಧಿ​ಸುವ ಅವ​ಕಾಶವಿದೆ