ಇಂಡಿಗೋ ವಿಮಾನದಲ್ಲೇ ಮಹಿಳೆ ಹೆರಿಗೆ ; ಮಗುವಿಗೆ ಸಿಗತ್ತಾ ಲೈಫ್ ಟೈಮ್ ಟಿಕೆಟ್ ?

08-10-20 01:46 pm       Bangalore Correspondent   ಕರ್ನಾಟಕ

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರು, ಅಕ್ಟೋಬರ್ 08: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ರಾತ್ರಿ 7.40ರ ಸುಮಾರಿಗೆ ಘಟನೆ ನಡೆದಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯನ್ನು ಸಹ ಪ್ರಯಾಣಿಕರಾಗಿದ್ದ ಗೈನಕಾಲಜಿಸ್ಟ್ ವೈದ್ಯರೊಬ್ಬರು ಮತ್ತು ಜೊತೆಗಿದ್ದ ಮಹಿಳೆಯರು ಸೇರಿ ಹೆರಿಗೆ ಮಾಡಿಸಿದ್ದಾರೆ.

ಮಹಿಳೆಗೆ 9 ತಿಂಗಳು ಪೂರ್ತಿಯಾಗಿರಲಿಲ್ಲ. ಆದರೆ, ಹೆರಿಗೆ ಹತ್ತಿರ ಬಂದಿರುವ ವೇಳೆ ಗರ್ಭಿಣಿಯರನ್ನು ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ. ವಿಮಾನ ನಿಲ್ದಾಣದ ಅಧಿಕಾರಿಗಳು ಇಲ್ಲಿ ಹೇಗೆ ಅವಕಾಶ ನೀಡಿದ್ದಾರೆ ಎಂದು ವೈದ್ಯರು ಪ್ರಶ್ನೆ ಮಾಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯದಲ್ಲಿದ್ದು, 8 ಗಂಟೆ ಸುಮಾರಿಗೆ ವಿಮಾನ ಬೆಂಗಳೂರು ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ತಾಯಿ, ಮಗುವನ್ನು ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿಮಾನ ಪ್ರಯಾಣ ಸಂದರ್ಭದಲ್ಲಿನ ಏರಿಳಿತದಿಂದಾಗಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.

ವಿಮಾನದಲ್ಲಿ ಹೆರಿಗೆಯಾಗಿದ್ದರಿಂದ ಮಗುವಿಗೆ ಉಚಿತ ಪ್ರಯಾಣದ ಸೌಲಭ್ಯ ಸಿಕ್ಕಿದೆ. ಹೀಗಾಗಿ ಆ ಮಗುವಿಗೆ ಜೀವಮಾನ ಪೂರ್ತಿ ಉಚಿತ ವಿಮಾನ ಪ್ರಯಾಣದ ಅವಕಾಶ ನೀಡಬೇಕೆಂದು ಜಾಲತಾಣದಲ್ಲಿ ಕೆಲವರು ಟ್ವೀಟ್ ಮಾಡಿದ್ದಾರೆ. ಹಿಂದೊಮ್ಮೆ ಎರಡು ಬಾರಿ ಇಂತಹ ನಿದರ್ಶನ ಆಗಿತ್ತು. 2017ರಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಮಹಿಳೆಗೆ ಹೆರಿಗೆ ಆಗಿತ್ತು. ಆ ಸಂದರ್ಭದಲ್ಲಿ ಜೆಟ್ ಏರ್ವೇಸ್ ವಿಮಾನ ಕಂಪೆನಿ, ಮಗುವಿನ ಜೀವಮಾನ ಪೂರ್ತಿ ಉಚಿತ ಪ್ರಯಾಣದ ಆಫರ್ ನೀಡಿತ್ತು. 20009ರಲ್ಲಿ ಏರ್ ಏಶ್ಯಾ ವಿಮಾನ ಕಂಪೆನಿ, ಮಲೇಶ್ಯಾದ ಮಹಿಳೆಯೊಬ್ಬಳು ಹೆರಿಗೆಯಾದ ಸಂದರ್ಭದಲ್ಲಿ ಮಗುವಿಗೆ ಇಂಥದ್ದೇ ಆಫರ್ ನೀಡಿತ್ತು.