ಓ ಮಹದೇಶ್ವರಾ...? ಕಾಡಿನಲ್ಲೇ ಮಗುವಿಗೆ ಜನ್ಮ‌ವಿತ್ತಳಾ ತಾಯಿ !

10-10-20 10:53 am       Headline Karnataka News Network   ಕರ್ನಾಟಕ

ಮಲೆ‌ ಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಗರ್ಭಿಣಿಯೊಬ್ಬಳು ಆಸ್ಪತ್ರೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾಡಿನ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ

ಮೈಸೂರು, ಅಕ್ಟೋಬರ್ .10 : ಚಾಮರಾಜನಗರ ಜಿಲ್ಲೆಯ ಮಲೆ‌ ಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯ ಕಾಡಿನ ದುರ್ಗಮ‌ ಹಾದಿಯಲ್ಲಿ ಪತಿಯೊಂದಿಗೆ ಆಸ್ಪತ್ರೆಗೆ ನಡೆದು ಹೋಗುತ್ತಿದ್ದ ಗರ್ಭಿಣಿ ಕಾಡಿನ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.  

ಕಾಡಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಪತಿ ವಾಹನ ಕರೆ ತರಲು ಹೋಗಿ ಬರುವಷ್ಟು ಕಾಲ ಕಾಡಿನಲ್ಲೇ ಹಸುಗೂಸಿನ ಜತೆ ಕಳೆದಿದ್ದಾಳೆ..!

ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಅಣ್ಣೇಹೊಲ ಗ್ರಾಮದ ವೀರಣ್ಣ ಎಂಬವರ ಪತ್ನಿ ಕಮಲ(22) ಈ ಗಟ್ಟಿಗಿತ್ತಿ ತಾಯಿ. ಗುರುವಾರ ರಾತ್ರಿ ಕಮಲನಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕಾಡಂಚಿನ ಗ್ರಾಮ ಆಗಿರುವುದರಿಂದ ವಾಹನ ಸೌಲಭ್ಯ ಸಿಗದೆ ವೀರಣ್ಣ ತನ್ನ ಪತ್ನಿಯನ್ನು ನಡೆಸಿಕೊಂಡೇ ಸುಮಾರು 5 ಕಿ.ಮೀ ದೂರದಲ್ಲಿರುವ ಮಹದೇಶ್ವರ ಬೆಟ್ಟದ ಸಾರ್ವಜನಿಕ ಆಸ್ಪತ್ರೆಗೆ ಹೊರಟಿದ್ದ.

ಹೊಟ್ಟೆ ನೋವಿನೊಂದಿಗೆ ಭಾರದ ಹೆಜ್ಜೆ ಇಡುತ್ತಿದ್ದ ಗರ್ಭಿಣಿಗೆ ಕಾಡಿನ ಮಧ್ಯೆ ದಾರಿಯಲ್ಲೇ ಹೆರಿಗೆಯಾಗಿ‌ದ್ದು ಹೆಣ್ಣು ಮಗು ಜನಿಸಿದೆ.

ಕೊನೆಗೆ, ತಾಯಿ ಮತ್ತು ಮಗುವನ್ನು ಅರ್ಧ ದಾರಿಯಲ್ಲೇ ಬಿಟ್ಟು ವಾಹನ ಕರೆತರಲೆಂದು ವೀರಣ್ಣ ಗ್ರಾಮದತ್ತ ತೆರಳಿದ್ದಾನೆ. ಈ ವೇಳೆ ಕಗ್ಗತ್ತಲಲ್ಲಿ, ಕಾಡು ಪ್ರಾಣಿಗಳ ಭಯದ ನಡುವೆ ತಾಯಿ ಮಗುವಿನೊಂದಿಗೆ ಸಮಯ ಕಳೆದಿದ್ದಾಳೆ. ಬಳಿಕ ಪತಿ ವೀರಣ್ಣ ನೆರೆ ಹೊರೆಯವರ ಬಳಿ ಹೇಳಿ ಸರಕು ಸಾಗಣೆ ವಾಹನವನ್ನು ಕರೆತಂದಿದ್ದು ಅದರಲ್ಲಿ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಚಿಕಿತ್ಸೆ ನೀಡಿದ ವೈದ್ಯರು ಮಗು ಮತ್ತು ತಾಯಿ ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.