ಮುನಿರತ್ನಗೆ ಬಿಗ್ ರಿಲೀಫ್ ; ಸ್ಪರ್ಧೆಗೆ ಗ್ರೀನ್ ಸಿಗ್ನಲ್, ಬಿಜೆಪಿ ಟಿಕೆಟ್ ಖಚಿತ !

13-10-20 12:55 pm       Headline Karnataka News Network   ಕರ್ನಾಟಕ

ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದ ಮಾಜಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ ಸಿಕ್ಕಿದೆ.

ಬೆಂಗಳೂರು, ಅಕ್ಟೋಬರ್ 13: ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದ ಮಾಜಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ ಸಿಕ್ಕಿದೆ. ನಕಲಿ ಮತದಾನ ಪ್ರಕರಣದಲ್ಲಿ ಪ್ರತಿವಾದಿ ಬಿಜೆಪಿಯ ಅಭ್ಯರ್ಥಿ ಮುನಿರಾಜು ಗೌಡ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದ್ದು, ಮುನಿರತ್ನ ಮತ್ತೆ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.

2018ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದ ಕಾಂಗ್ರೆಸಿನ ಮುನಿರತ್ನ ವಿರುದ್ಧ ಬಿಜೆಪಿ ಅಭ್ಯರ್ಥಿ ಮುನಿರಾಜು, ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟಿಗೆ ದೂರು ಸಲ್ಲಿಸಿದ್ದರು. ಮುನಿರತ್ನ 25 ಸಾವಿರ ನಕಲಿ ಮತಗಳ ಮೂಲಕ ಗೆದ್ದಿದ್ದಾಗಿ ಆರೋಪಿಸಿ ಬಿಜೆಪಿ ದಾವೆ ಹೂಡಿತ್ತು. ಈ ನಡುವೆ, 2019ರ ಮಾರ್ಚ್ ವೇಳೆಗೆ ಮುನಿರತ್ನ ಮತ್ತು ಇತರೇ 15 ಮಂದಿ ಕಾಂಗ್ರೆಸ್, ಜೆಡಿಎಸ್ ಶಾಸಕರ ಜೊತೆಗೆ ಬಿಜೆಪಿ ಬೆಂಬಲಿಸಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ವಿಧಾನಸಭೆ ಸ್ಪೀಕರ್ ಅವರನ್ನು ಅನರ್ಹಗೊಳಿಸಿದ್ದರು. ಅನರ್ಹ ಪ್ರಕರಣ ಮತ್ತೆ ಕೋರ್ಟ್ ಮೆಟ್ಟಿಲೇರಿ, ಇತ್ಯರ್ಥಗೊಂಡು ಇತರೇ ಶಾಸಕರು ಮತ್ತೆ ಚುನಾವಣೆ ಸ್ಪರ್ಧಿಸಿ ಗೆದ್ದು ಸಚಿವರಾಗಿದ್ದೂ ಆಗಿತ್ತು. ಆದರೆ ಮುನಿರತ್ನ ವಿರುದ್ಧ ಬಿಜೆಪಿಯೇ ಪ್ರಕರಣ ದಾಖಲಿಸಿದ್ದರಿಂದ ಆರ್.ಆರ್. ನಗರದ ಉಪ ಚುನಾವಣೆ ಕಗ್ಗಂಟಾಗಿತ್ತು.

ಇದೀಗ ಚುನಾವಣಾ ಆಯೋಗ ಆರ್.ಆರ್. ನಗರದ ಉಪ ಚುನಾವಣೆಗೆ ನ.3ರ ದಿನಾಂಕ ಘೋಷಿಸಿದ್ದರೂ, ಕೋರ್ಟ್ ತಗಾದೆ ಮುನಿರತ್ನ ಅವರನ್ನು ಕಂಗಾಲು ಮಾಡಿತ್ತು. ಇದೀಗ ಬಿಜೆಪಿಯೇ ಮುನಿರಾಜು ಗೌಡ ಅರ್ಜಿ ವಜಾ ಆಗುವಂತೆ ನೋಡಿಕೊಂಡಿದ್ದು, ಮುನಿರತ್ನ ಸ್ಪರ್ಧೆಗೆ ಪರೋಕ್ಷವಾಗಿ ಸಹಕರಿಸಿದೆ. ಈ ಮೂಲಕ ಮುನಿರತ್ನ ಮತ್ತೆ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಈ ನಡುವೆ ಕಳೆದ ಬಾರಿ ಬಿಜೆಪಿಯಿಂದ ಆರ್.ಆರ್. ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ತುಳಸಿ ಮುನಿರಾಜು ಗೌಡ ಅವರನ್ನು ಪಕ್ಷ ನಿರ್ದೇಶನ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಈವರೆಗೂ ಬಿ.ಎಲ್. ಸಂತೋಷ್ ಬಣದ ಮೂಲಕ ಮುನಿರಾಜು ಮತ್ತೆ ಟಿಕೆಟ್ ಪಡೆಯಲು ಲಾಬಿ ನಡೆಸಿದ್ದರು. ಆದರೆ, ಸಿಎಂ ಯಡಿಯೂರಪ್ಪ ಮಾತ್ರ ಮತ್ತೆ ಮುನಿರತ್ನಗೇ ಟಿಕೆಟ್ ನೀಡಲು ಹೈಕಮಾಂಡ್ ಮಟ್ಟದಲ್ಲಿ ಒತ್ತಡ ಹಾಕಿದ್ದರು. ಇದೀಗ ನಕಲಿ ಮತ ಪ್ರಕರಣದಲ್ಲಿ ಬಿಜೆಪಿ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಮುನಿರತ್ನಗೆ ಸ್ಪರ್ಧೆಗೆ ಹಾದಿ ಸುಗಮ ಆದಂತಾಗಿದೆ.