ಸ್ವಮೂತ್ರ ಪಾನದಿಂದ ಕ್ಯಾನ್ಸರ್ ಚಿಕಿತ್ಸೆ ; ಮೈಸೂರು ವಿವಿಯ ಸಮಾಜಶಾಸ್ತ್ರ ಪಠ್ಯದಲ್ಲಿ ಉಲ್ಲೇಖ, ವಿವಾದಕ್ಕೊಳಗಾದ ಎನ್ಇಪಿ ಪಠ್ಯ 

19-11-22 07:18 pm       HK News Desk   ಕರ್ನಾಟಕ

ಸ್ವಮೂತ್ರ ಪಾನದಿಂದ ಕ್ಯಾನ್ಸರ್‌ ಗುಣಪಡಿಸಬಹುದು ಎಂಬುದಾಗಿ ಮೈಸೂರು ವಿವಿಯ ಪದವಿ ತರಗತಿಗೆ ನೀಡಿರುವ ʻವೈದ್ಯಕೀಯ ಸಮಾಜಶಾಸ್ತ್ರʼ ಪಠ್ಯ ಪುಸ್ತಕದಲ್ಲಿ ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದ ಅನ್ವಯ ಈ ಪಠ್ಯ ರೂಪಿಸಲಾಗಿದೆ. 

ಮೈಸೂರು, ನ.19 : ಸ್ವಮೂತ್ರ ಪಾನದಿಂದ ಕ್ಯಾನ್ಸರ್‌ ಗುಣಪಡಿಸಬಹುದು ಎಂಬುದಾಗಿ ಮೈಸೂರು ವಿವಿಯ ಪದವಿ ತರಗತಿಗೆ ನೀಡಿರುವ ʻವೈದ್ಯಕೀಯ ಸಮಾಜಶಾಸ್ತ್ರʼ ಪಠ್ಯ ಪುಸ್ತಕದಲ್ಲಿ ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದ ಅನ್ವಯ ಈ ಪಠ್ಯ ರೂಪಿಸಲಾಗಿದೆ. 

ಮೂತ್ರ ಚಿಕಿತ್ಸೆ ಪ್ರಕೃತಿ ಚಿಕಿತ್ಸೆಯ ಒಂದು ಭಾಗ. ಸ್ವಮೂತ್ರ ಪಾನ, ಮೂತ್ರ ಲೇಪನದಿಂದ ಏಡ್ಸ್‌, ಕ್ಯಾನ್ಸರ್‌, ಕಣ್ಣು, ಕಿವಿ, ಹಲ್ಲು, ಚರ್ಮ ರೋಗಗಳನ್ನು ನಿಯಂತ್ರಿಸಬಹುದು ಎಂದು ಈ ಪಠ್ಯದಲ್ಲಿ ಬರೆಯಲಾಗಿದೆ. ಈ ಮಾಹಿತಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು, ಹಲವರು ಇದನ್ನು ಆಕ್ಷೇಪಿಸಿದ್ದಾರೆ.

ಪ್ರಕೃತಿಯು ರೋಗ ನಿರೋಧಕ ಶಕ್ತಿಯನ್ನು ಮನುಷ್ಯನಿಗೆ ತನ್ನ ದೇಹದಲ್ಲೇ ನೀಡಿದೆ. ಆ ಶಕ್ತಿಯೇ ಮೂತ್ರ. ಇದೇ ಕಾರಣಕ್ಕಾಗಿ ಸಹಸ್ರಾರು ವರ್ಷಗಳಿಂದ ಯೋಗಿಗಳು ಮೂತ್ರ ಸೇವಿಸುತ್ತಿದ್ದರು ಎಂದು ಪಠ್ಯದಲ್ಲಿ ವಿವರಿಸಲಾಗಿದೆ. ಮೈಸೂರು ವಿವಿಯ ಬಿಎ ಕೋರ್ಸ್ 5ನೇ ಸೆಮಿಸ್ಟರ್ ಪಠ್ಯಪುಸ್ತಕ ಇದಾಗಿದ್ದು ವೈದ್ಯಕೀಯ ಸಮಾಜಶಾಸ್ತ್ರದ ಈ ಪಠ್ಯ ಪುಸ್ತಕವನ್ನು ಪ್ರೊ.ಕೆ ಭೈರಪ್ಪ ಬರೆದಿದ್ದಾರೆ. ಮೂತ್ರ ಚಿಕಿತ್ಸೆ, ಗೋಮೂತ್ರ ಚಿಕಿತ್ಸೆ, ಶಂಕು ಚಿಕಿತ್ಸೆ, ಚುಟ್ಕಿ ಚಿಕಿತ್ಸೆ, ತೈಲ ಚಿಕಿತ್ಸೆ, ಸಿದ್ಧ ವೈದ್ಯ ಪದ್ಧತಿ, ಜ್ಯೂಸ್ ಚಿಕಿತ್ಸೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಸಂಸ್ಕೃತ ಸಾಹಿತ್ಯ ನಿಧಿಯಲ್ಲಿರುವ ಶಿವಾಂಬು ಸಂಹಿತೆಯಲ್ಲಿ ಇದರ ಮಾಹಿತಿ ಇದೆ ಎಂದು ಹೇಳಲಾಗಿದೆ. ʻನಿಮ್ಮ ಆರೋಗ್ಯ ರಕ್ಷಣೆಗಾಗಿ ನಿಮ್ಮ ದೇಹವನ್ನೇ ಅವಲಂಬಿಸಿ ಎಂಬ ಉಲ್ಲೇಖ ಬೈಬಲ್‌ನಲ್ಲೂ ಇದೆ. ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ನೀಲ್‌ ಆರ್ಮ್‌ಸ್ಟ್ರಾಂಗ್‌ ಬರೆದಿರುವ ವಾಟರ್‌ ಆಫ್‌ ಲೈಫ್‌ ಪುಸ್ತಕದಲ್ಲೂ ಸ್ವಮೂತ್ರ ಪಾನದ ವಿವರಣೆ ಇದೆʼ ಎಂದು ಪುಸ್ತಕದಲ್ಲಿ ಬರೆಯಲಾಗಿದೆ.

ಈ ನಡುವೆ ಸ್ವಮೂತ್ರ ಪಾನವೇ ಮದ್ದು ಎಂಬುದು ಅತ್ಯಂತ ಅವೈಜ್ಞಾನಿಕ ಮತ್ತು ಮೂರ್ಖತನದ ಪರಮಾವಧಿ ಎಂದು ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ಟೀಕಿಸಿದೆ. ಸ್ವ ಮೂತ್ರಪಾನದಿಂದ ಏಡ್ಸ್, ಕ್ಯಾನ್ಸರ್, ಕಣ್ಣು, ಕಿವಿ, ಹಲ್ಲು, ಹಾಗೂ ಚರ್ಮ ರೋಗಗಳನ್ನು ನಿಯಂತ್ರಿಸಬಹುದು ಎಂಬುದು ಅವೈಜ್ಞಾನಿಕ. ವೈದ್ಯಕೀಯ ಸಮಾಜಶಾಸ್ತ್ರ ಪುಸ್ತಕದಲ್ಲಿ ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶಗಳನ್ನು ಸೇರಿಸಬೇಕು. ಕೇವಲ ಪ್ರಾಚೀನ ಗ್ರಂಥಗಳನ್ನು ಉಲ್ಲೇಖಿಸಿ ಈ ರೀತಿ ಪಠ್ಯಗಳನ್ನು ರಚಿಸಲಾಗಿದೆ. ಇದನ್ನು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಲಾಗಿದೆ.

Consuming human Urine can treat cancer, mentioned in Mysuru university biology text book, sparks controversy.