ಕೊರೊನಾ ಸೋಂಕಿಗೆ ಒಳಗಾಗಿದ್ದ ಮೂಡುಬಿದ್ರೆಯ ಶಿಕ್ಷಕಿ ಸಾವು ; ಸಿಎಂ ಭರವಸೆಗೂ ಕಾಯದ ವಿಧಿ !

16-10-20 10:44 am       Mangalore Correspondent   ಕರ್ನಾಟಕ

ಕೊರೊನಾ ಸೋಂಕಿಗೆ ಒಳಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮೂಡುಬಿದ್ರೆಯ ಶಿಕ್ಷಕಿ ಪದ್ಮಾಕ್ಷಿ ಎನ್. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 

ಮಂಗಳೂರು, ಅಕ್ಟೋಬರ್ 16: ಕೊರೊನಾ ಸೋಂಕಿಗೆ ಒಳಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮೂಡುಬಿದ್ರೆಯ ಶಿಕ್ಷಕಿ ಪದ್ಮಾಕ್ಷಿ ಎನ್. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. 

ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಶಿಕ್ಷಕಿ ಸಾವು - ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಈ ನಡುವೆ, ಸರಕಾರದ ವಿದ್ಯಾಗಮ ಯೋಜನೆಯಿಂದಾಗಿ ತಾಯಿ ಕೊರೋನಾಗೆ ತುತ್ತಾಗಿದ್ದಾರೆಂದು ಪುತ್ರಿ ಜಾಲತಾಣದಲ್ಲಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು ವೈರಲ್ ಆಗಿತ್ತು. ಪತ್ರ ಗಮನಿಸಿ, ಸಿಎಂ ಯಡಿಯೂರಪ್ಪ ಶಿಕ್ಷಕಿಯ ಸಂಪೂರ್ಣ ಚಿಕಿತ್ಸೆ ಭರಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಈ ಬಗ್ಗೆ ದ.ಕ. ಜಿಲ್ಲಾಧಿಕಾರಿಗೆ ಕರೆ ಮಾಡಿ ಸೂಕ್ತವಾಗಿ ಸ್ಪಂದಿಸುವಂತೆ ಮತ್ತು ಹೆಚ್ಚಿನ ಚಿಕಿತ್ಸೆಗೆ ಏರ್ಪಾಡು ಮಾಡುವಂತೆ ಸೂಚನೆ ನೀಡಿದ್ದರು. ಈ ಮಧ್ಯೆ ಅ.13ರಂದು ಶಿಕ್ಷಕಿಯ ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಿದ್ದಾಗಿ ಆಸ್ಪತ್ರೆಯಿಂದ ತಿಳಿಸಲಾಗಿತ್ತು.‌

ಆದರೆ, ಕೊರೊನಾ ಬಳಿಕ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿಕ್ಷಕಿ ಪದ್ಮಾಕ್ಷಿ ಈಗ ಸಾವನ್ನಪ್ಪಿದ್ದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. 

ಮೂಡಬಿದ್ರೆಯ ಮಕ್ಕಿ ಜವಹಾರಲಾಲ್ ನೆಹರು ಮೆಮೋರಿಯಲ್ ಪ್ರೌಢಶಾಲೆಯಲ್ಲಿ ಪದ್ಮಾಕ್ಷಿ ಶಿಕ್ಷಕಿಯಾಗಿದ್ದರು. ಅವರ ಪತಿ ಶಶಿಕಾಂತ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದರು.‌ ಇದೇ ವೇಳೆ, ಚಿಕಿತ್ಸೆಗೆ ಹಣವಿಲ್ಲ ಎಂದು ಪುತ್ರಿ ಐಶ್ವರ್ಯಾ ಜೈನ್ ಫೇಸ್ ಬುಕ್ ನಲ್ಲಿ ಅಳಲು ತೋಡಿಕೊಂಡಿದ್ದರು.