ಬೆಂಗ್ಳೂರು ಏರ್ಪೋರ್ಟ್ ಗೋದಾಮಿನಲ್ಲಿದ್ದ 2.5 ಕೆಜಿ ಚಿನ್ನ ಮಾಯ !! ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್

18-10-20 01:11 pm       Headline Karnataka News Network   ಕರ್ನಾಟಕ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಲಾಗಿದ್ದ 2.5 ಕೇಜಿ ಚಿನ್ನ ನಾಪತ್ತೆಯಾಗಿದ್ದು ಆರು ಮಂದಿ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 18 : ಮಹತ್ವದ ಬೆಳವಣಿಗೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದು ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ 2.5 ಕೇಜಿ ಚಿನ್ನ ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದ 2.5 ಕೆಜಿ ಚಿನ್ನ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದ್ದಾರೆ.

ಕಸ್ಟಮ್ಸ್‌ ಇಲಾಖೆಯ ಜಂಟಿ ಆಯ್ತುಕ ಎಂ.ಜೆ. ಚೇತನ್‌ ದೂರಿನ ಮೇರೆಗೆ ಕಸ್ಟಮ್ಸ್‌ ಮತ್ತು ಕೇಂದ್ರ ಅಬಕಾರಿ ಇಲಾಖೆಯ ಸಹಾಯಕ ಆಯುಕ್ತ ವಿನೋದ್‌ ಚಿನ್ನಪ್ಪ ಮತ್ತು ಕೇಶವ್‌, ಸುಪರಿಟೆಂಡೆಂಟ್‌ ಎನ್‌. ಜಿ ರವಿಶೇಖರ್‌, ಕೆಬಿ ಲಿಂಗರಾಜು ಮತ್ತು ಖಾಸಗಿ ವ್ಯಕ್ತಿ ಎಸ್‌.ಟಿ ಹಿರೇಮಠ್‌ ವಿರುದ್ಧ ಎಫ್‌ಐರ್‌ ದಾಖಲಾಗಿದೆ. 

ಕಳ್ಳ ಸಾಗಣೆಯ ಮೂಲಕ ದೇಶಕ್ಕೆ ಚಿನ್ನ ಸಾಗಿಸುವ ಪ್ರಕರಣಗಳನ್ನು ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ಆದರೆ, ಕಳೆದ 2012 ರಿಂದ 14ರ ಮಧ್ಯೆ 13 ಪ್ರಕರಣಗಳಲ್ಲಿ ಎರಡು ಕೇಜಿ 594 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಸಿಕ್ಕಿಬಿದ್ದ ಚಿನ್ನವನ್ನು ವಿಮಾನ ನಿಲ್ದಾಣದ ಕಾರ್ಗೋ ಗೋದಾಮಿನಲ್ಲಿ ಇಡಲಾಗಿತ್ತು. ಆದರೆ ಅಲ್ಲಿ ಇಟ್ಟಿದ್ದ ಚಿನ್ನ ಈಗ ನಾಪತ್ತೆಯಾಗಿರುವುದು ಹೈದರಾಬಾದಿನ ವಿಚಕ್ಷಣ ದಳದ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ. 

ಈ ವೇಳೆ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ವಿಚಕ್ಷಣ ದಳದ ಅಧಿಕಾರಿಗಳ ಮಾಹಿತಿಯ ಮೇರೆಗೆ ಕಸ್ಟಮ್ಸ್ ಇಲಾಖೆ ಆಯುಕ್ತ ಚೇತನ್‌ ದೂರು ನೀಡಿದ್ದರು. ಅದರಂತೆ ಸಿಬಿಐ ಅಧಿಕಾರಿಗಳು ಅ.12 ರಂದು ಎಫ್‌ಐಆರ್‌ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ.

In a startling incident, as much as 2.5 kg of gold has gone missin from the cargo section of Bengaluru Kempegowda international godown. FIR has been registered against 5 custom officers.