ಊರಿಗೆ ಊರೇ ಮುಳುಗ್ತಿದೆ, ಇವ್ರೇನು ಶಿಕಾರಿಪುರಕ್ಕೆ ಸಿಎಂ ಆಗಿದ್ದಾರಾ... ; ಎಚ್ಡಿಕೆ ಪ್ರಶ್ನೆ

19-10-20 05:41 pm       Headline Karnataka News Network   ಕರ್ನಾಟಕ

ಜಲಪ್ರಳಯದಲ್ಲಿ ಇಡೀ ಉತ್ತರ ಕರ್ನಾಟಕ ತತ್ತರಿಸಿದರೆ ಯಡಿಯೂರಪ್ಪರವರಿಗೆ ಶಿಕಾರಿಪುರ ಮಾತ್ರ ಕಾಣುತ್ತಿರುವುದು ವಿಪರ್ಯಾಸ ಎಂದು ಎಚ್ ಡಿಕೆ ಕಿಡಿಕಾರಿದ್ದಾರೆ

ಬೆಂಗಳೂರು, ಅಕ್ಟೋಬರ್ 19 : ಸಿಎಂ ಬಿಎಸ್​ ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರ ಪ್ರವಾಸದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರು ತತ್ತರಿಸಿದ್ದಾರೆ. ನಾಡಿದ್ದು ಸಿಎಂ ವೈಮಾನಿಕ ಸಮೀಕ್ಷೆ ಮಾಡ್ತಾರೆ ಅಂತ ನೋಡಿದ್ದೇನೆ. ಸಿಎಂಗೆ ಹೃದಯದಲ್ಲಿ ಗಾಂಭೀರ್ಯ ಇದ್ದಿದ್ದರೆ ಶಿಕಾರಿಪುರಕ್ಕೆ ಹೋಗೋ ಬದಲು ಅಲ್ಲಿಗೆ ಹೋಗಬೇಕಿತ್ತು. ಊರು ಹೊತ್ತಿಕೊಂಡು ಉರಿಯುತ್ತಿದೆ, ಜಿಲ್ಲೆಗಳು ನೀರಿನಲ್ಲಿ ಮುಳುಗಿದೆ. ಪರಿಸ್ಥಿತಿ ಹೀಗಿದ್ದರೂ ಶಿಕಾರಿಪುರಕ್ಕೆ ಹೋಗಿ ಸಿಎಂ ಕುಳಿತಿದ್ದಾರೆ ಎಂದು ಎಚ್​ಡಿಕೆ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್​ವೈ ಶಿಕಾರಿಪುರವ‌ನ್ನು ಮಾಡಲ್ ಮಾಡಲು ಹೊರಟಿದ್ದಾರೆ. ಹಿಂದೆ ನಾನು ಬಜೆಟ್ ಮಂಡನೆ ಮಾಡಿದ್ದಾಗ ರಾಮನಗರ, ಮಂಡ್ಯ ಬಜೆಟ್ ಅಂದ್ರು, ಇವಾಗ ಯಡಿಯೂರಪ್ಪ ಏನು ಶಿಕಾರಿಪುರದ ಸಿಎಂ ಆಗಿದ್ದಾರಾ...? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಬಿಎಸ್​ವೈ ವಿರುದ್ಧ ಸಿಡಿದಿದ್ದೆರು. ಜನರಿಗೆ ಈ ಸರ್ಕಾರ ಸ್ಪಂದನೆ ಮಾಡ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಮಳೆ ಬಂದು ಸಂತ್ರಸ್ತರು ನರಳುತ್ತಿದ್ದಾರೆ. ಸಹಾಯ ಮಾಡುವ ಕನಿಷ್ಠ ಸೌಜನ್ಯ ಕೂಡ ಈ ಸರ್ಕಾರಕ್ಕೆ ಇಲ್ಲ. ಯಾವ ಮಂತ್ರಿಗೂ ಜವಾಬ್ದಾರಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಚುನಾವಣೆಗೆ ಕೋಟಿ‌ ಕೋಟಿ ಹಣ ಖರ್ಚು ಮಾಡ್ತಿದ್ದಾರೆ. ಪಾಪದ ಹಣ ತಗೊಂಡು ಹೋಗಿ ಶಿರಾ ಚುನಾವಣೆ ಮಾಡ್ತಿದ್ದೀರಾ? ಆ ಹಣವನ್ನ ಸಿಎಂ ಮಾಡಲು ಸ್ಥಾನ ಕೊಟ್ಟ ಜನರಿಗೆ ಕೊಡಿ. ಸರ್ಕಾರದ ಪರಿಹಾರಕ್ಕೆ ನಾನು ಕಾಯಲ್ಲ. ಬುಧವಾರ‌ ಪ್ರವಾಹ ಪ್ರದೇಶಕ್ಕೆ ನಾನೇ ಅಕ್ಕಿ, ಬೇಳೆ, ಬಟ್ಟೆ ಕಳಿಸ್ತಿದ್ದೇನೆ. ನನ್ನ ಕರ್ತವ್ಯ ನಾನು ಮಾಡ್ತಿದ್ದೇನೆ. ಆ ಭಾಗದ ಜನ ಮತ ಕೊಡದೇ ಹೋದ್ರು ನನ್ನ ಪ್ರಾಮಾಣಿಕ ಹಣದಲ್ಲಿ ಸಹಾಯ ಮಾಡ್ತಿದ್ದೇನೆ. ಬುಧವಾರ ಎಲ್ಲ ಸಾಮಗ್ರಿಗಳನ್ನು ನಮ್ಮ ‌ಪಕ್ಷದಿಂದ ಕೊಡ್ತಿದ್ದೇವೆ ಎಂದರು.

ಇದೇ ವೇಳೆ, ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕಿಡಿಕಾರಿದ ಎಚ್ಡಿಕೆ, ಕೆಆರ್ ಪೇಟೆಯಂತೆ ಶಿರಾ ಮುಗಿಸ್ತೀನಿ ಅಂತಾ ಸಿಎಂ ಪುತ್ರ ಹೇಳಿದ್ದಾರೆ. ಅವರು ಜನರಿಗೆ ಕುಡಿಸಿ ಬೀದಿ ಬೀದಿಯಲ್ಲಿ ಮಲಗಿಸಿದ್ದಾರೆ. ಇದು ಮಾಧ್ಯಮಗಳಲ್ಲೇ ಬಂದಿದೆ. ನಾಮಪತ್ರ ಸಲ್ಲಿಕೆ ವೇಳೆ ಯುವಕರಿಗೆ ಕುಡಿಸಿ, ರಸ್ತೆಯಲ್ಲೇ ಮಲಗಿಸಿದ್ದಾರೆ. ಅದೇ ದುಡ್ಡನ್ನು ತಗೊಂಡು ಹೋಗಿ ಬೀದಿಯಲ್ಲಿ ಇರುವ ಜನರಿಗೆ ಕೊಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದರು.