ಲಾಕ್ಡೌನ್ ಎಫೆಕ್ಟ್ ; ರಾಜ್ಯದಲ್ಲಿ 500ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬೀಗ..!?

23-10-20 04:03 pm       Headline Karnataka News Network   ಕರ್ನಾಟಕ

ಲಾಕ್ಡೌನ್ ಕಾರಣದಿಂದಾಗಿ ರಾಜ್ಯದಲ್ಲಿ ಶಾಲಾ ಚಟುವಟಿಕೆಗೆ ಬ್ರೇಕ್ ಬಿದ್ದಿದ್ದು, ಇದರ ಪರಿಣಾಮ 500ಕ್ಕೂ ಹೆಚ್ಚು ಶಾಲೆಗಳು ಬೀಗ ಹಾಕುವ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು, ಅಕ್ಟೋಬರ್ 23: ಕೊರೊನಾ ನಿರ್ಬಂಧ, ಲಾಕ್ಡೌನ್ ಕಾರಣದಿಂದಾಗಿ ರಾಜ್ಯದಲ್ಲಿ ಶಾಲಾ ಚಟುವಟಿಕೆಗೆ ಬ್ರೇಕ್ ಬಿದ್ದಿದ್ದು, ಇದರ ಪರಿಣಾಮ 500ಕ್ಕೂ ಹೆಚ್ಚು ಶಾಲೆಗಳು ತೀವ್ರ ಮುಗ್ಗಟ್ಟಿಗೆ ಸಿಲುಕಿವೆ ಎನ್ನುವ ಮಾಹಿತಿ ಹೊರಬಿದ್ದಿದೆ.  

ಪ್ರಸಕ್ತ ವರ್ಷದ ಶುಲ್ಕ ಕಟ್ಟುವಂತೆ ಖಾಸಗಿ ಶಾಲೆಗಳ ಆಡಳಿತಗಳು ಪೋಷಕರಿಗೆ ಸೂಚನೆ ಕೊಡುತ್ತಲೇ ಬಂದಿವೆ. ಆದರೆ, ಶಾಲೆ ಆರಂಭವಾಗುವ ಬಗ್ಗೆ ಖಾತ್ರಿ ಇಲ್ಲದ ಕಾರಣ, ಹೆಚ್ಚಿನ ಪೋಷಕರು ಶುಲ್ಕ ಕಟ್ಟಿಲ್ಲ. ಶುಲ್ಕ ಕಟ್ಟದ ಪರಿಣಾಮ ಶಾಲಾಡಳಿತ ಮಂಡಳಿಗಳಿಗೆ ಶಾಲೆ ನಿರ್ವಹಣೆ ಮಾಡುವುದು ಕಷ್ಟವಾಗಿದ್ದು, ಶಾಲೆಗಳಿಗೆ ಬೀಗ ಹಾಕುವ ಹಂತಕ್ಕೆ ತಲುಪಿದ್ದಾರೆ.

ಇದರ ಪರಿಣಾಮ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಹಳೆ ಮೈಸೂರು ಭಾಗ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 500ಕ್ಕೂ ಹೆಚ್ಚು ಶಾಲೆಗಳು ಶಾಶ್ವತವಾಗಿ ಬೀಗ ಬೀಳುವ ಆತಂಕವನ್ನು ಎದುರಿಸುತ್ತಿವೆ. ಸಿಬ್ಬಂದಿಗಳ ವೇತನ, ಶಾಲಾ ಕಟ್ಟಡಗಳ ಬಾಡಿಗೆ, ನಿರ್ವಹಣೆ ವೆಚ್ಚದಿಂದಾಗಿ ಪ್ರತಿ ತಿಂಗಳು ಲಕ್ಷಾಂತರ ರೂ. ಖರ್ಚಾಗುತ್ತಿದೆ ಎಂದು ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು ಸರಕಾರದ ಮುಂದೆ ಅಲವತ್ತುಕೊಂಡಿವೆ.

ನರ್ಸರಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಒಂದೇ ಬಾರಿಗೆ ಬೀಗ ಬಿದ್ದರೆ ಅದನ್ನೇ ನಂಬಿದ್ದ ಸಾವಿರಾರು ಸಿಬ್ಬಂದಿ ಕೆಲಸ ಕಳಕೊಳ್ಳುವ ಆತಂಕದಲ್ಲಿದ್ದಾರೆ.