ರಾಜ್ಯದಲ್ಲಿ ಮಳೆಯ ರೌದ್ರಾವತಾರ ; ಜನಜೀವನ ಅಸ್ತವ್ಯಸ್ತ, ಮೂವರ ಬಲಿ

24-10-20 11:16 am       Headline Karnataka News Network   ಕರ್ನಾಟಕ

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಶುಕ್ರವಾರ ಬಹುತೇಕ ಕ್ಷೀಣಿಸಿದೆ.

ಬೆಂಗಳೂರು(ಅ.24): ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಶುಕ್ರವಾರ ಬಹುತೇಕ ಕ್ಷೀಣಿಸಿದೆ. ಈ ಮಧ್ಯೆ, ಮಳೆ ಸಂಬಂಧಿ ಅನಾಹುತಕ್ಕೆ ಮೈಸೂರು ಹಾಗೂ ಚಿಕ್ಕಬಳ್ಳಾಪುರದಲ್ಲಿ ಅಪ್ಪ-ಮಗ ಸೇರೆ ಮೂವರು ಬಲಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದ ವಿಕುಮಾರ್‌(45), ಪುತ್ರ ರಾಹುಲ್‌(14) ಮಳೆಯಿಂದಾಗಿ ಶಿಥಿಲಗೊಂಡಿದ್ದ ಮನೆ ಚಾವಣಿ ಕುಸಿದು ಮೃತಪಟ್ಟರೆ, ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲೂಕಿನ ಮಂಡಿಗನಹಳ್ಳಿಯ ರೈತ ರೇವಣ್ಣ (39) ಸಿಡಿಲು ಬಡಿಲು ಸಾವಿಗೀಡಾಗಿದ್ದಾರೆ.

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕೊಡಗಿನಲ್ಲಿ ಇಡೀ ದಿನ ಬಿಟ್ಟು ಬಿಟ್ಟು ಮಳೆಯಾದರೆ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆಯ ವೇಳೆಗೆ ತುಂತುರು ಮಳೆಯಾಗಿದೆ.

ಆತಂಕ ದೂರ:

ಉತ್ತರ ಕರ್ನಾಟಕದ ನೆರೆಪೀಡಿತ ಪ್ರದೇಶಗಳಾದ ಕಲಬುರಗಿ, ಯಾದಗಿರಿ, ವಿಜಯಪುರದಲ್ಲಿ ಮಳೆಯ ಆತಂಕವಿತ್ತಾದರೂ ಇಡೀ ದಿನ ಬಿಸಿಲಿನ ವಾತಾವರಣವಿದ್ದ ಕಾರಣ ಸಂತ್ರಸ್ತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಪ್ರವಾಹ ಇಳಿಮುಖವಾಗಿದ್ದು, ಮಳೆಯ ಆತಂಕವೂ ನಿವಾರಣೆಯಾದ ಹಿನ್ನೆಲೆಯಲ್ಲಿ ಕಾಳಜಿ ಕೇಂದ್ರದಲ್ಲಿ ಉಳಿದಿದ್ದ ಬಹುತೇಕ ಸಂತ್ರಸ್ತರು ತಮ್ಮ ಮನೆಗಳಿಗೆ ವಾಪಸಾದರು.