ಮಹಾಮಳೆಗೆ ಮುಳುಗಿದ ಬೆಂಗಳೂರು ; ನೀರಿನಲ್ಲಿ ಕೊಚ್ಚಿಹೋದ ಕಾರು, ವಾಹನಗಳು !

24-10-20 12:57 pm       Bangalore Correspondent   ಕರ್ನಾಟಕ

ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಅಲ್ಲಿನ ಜನ ಕಂಡುಕೇಳರಿಯದ ರೀತಿ ಮಳೆಯಾಗಿದ್ದು, ಕೆಲವು ಕಡೆ ಊರಿಗೆ ಊರೇ ಮುಳುಗಿ ಹೋಗಿದೆ.

ಬೆಂಗಳೂರು,ಅಕ್ಟೋಬರ್ 24: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಜೆಯಿಂದ ಅಲ್ಲಿನ ಜನ ಕಂಡುಕೇಳರಿಯದ ರೀತಿ ಮಳೆಯಾಗಿದ್ದು, ಕೆಲವು ಕಡೆ ಊರಿಗೆ ಊರೇ ಮುಳುಗಿ ಹೋಗಿದೆ. ವೃಷಭಾವತಿ ನದಿ ಸಂಪರ್ಕಿಸುವ ರಾಜಕಾಲುವೆಗಳಲ್ಲಿ ನೆರೆ ಉಕ್ಕಿ ಬಂದಿದ್ದು, ರಸ್ತೆಗಳಲ್ಲಿ ಸಾಗುತ್ತಿದ್ದ ವಾಹನಗಳು, ಮನೆಗಳ ಅಕ್ಕ ಪಕ್ಕ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ತೇಲಿ ಹೋಗಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೆರೆಹಳ್ಳಿಯ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಅಲ್ಲಿನ 500ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಈ ಭಾಗದಲ್ಲಿ ವೃಷಭಾವತಿ ಕಾಲುವೆಗೆ ಸಂಪರ್ಕಿಸುವ ಬೃಹತ್‌ ರಾಜಕಾಲುವೆಯ ಕಾಮಗಾರಿಗಾಗಿ ನೀರಿನ ದಿಕ್ಕನ್ನು ಬದಲಿಸಲಾಗಿತ್ತು. ಇದರಿಂದ ಭಾರೀ ಪ್ರಮಾಣದ ನೀರು ಒಮ್ಮೆಗೆ ನುಗ್ಗಿ ಬಂದಿದ್ದು, ಆಸುಪಾಸಿನ ಮನೆಗಳು, ಕಟ್ಟಡಗಳು ಜಲಾವೃತವಾಗಿದವು. ಹೊಸಕೆರೆಹಳ್ಳಿ ಪಿಇಎಸ್‌ ಕಾಲೇಜು ಹಿಂಭಾಗ ರಸ್ತೆಯಲ್ಲೇ ನೀರಿ ನದಿಯಂತೆ ಹರಿದಿದ್ದು, ನೋಡ ನೋಡುತ್ತಲೇ ಮಾರುತಿ ಸ್ವಿಫ್ಟ್‌ ಕಾರೊಂದು ಕೊಚ್ಚಿಕೊಂಡು ಹೋಗಿತ್ತು.

ಅಪಾರ್ಟ್‌ಮೆಂಟ್‌, ಮನೆಗಳಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ತಂಡ ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿ ಬೋಟ್‌ ಮೂಲಕ ರಕ್ಷಣೆ ಮಾಡಿದ್ದಾರೆ. ಹೊಸಕೆರೆಹಳ್ಳಿ ದತ್ತಾತ್ರೇಯ ದೇವಾಲಯವೂ ಮುಳುಗಿದೆ. ಬೆಂಗಳೂರು ನಗರ ಭಾಗದ ಬಸವನಗುಡಿ, ಹನುಮಂತನಗರ, ಕತ್ರಿಗುಪ್ಪೆ, ಪದ್ಮನಾಭನಗರ, ಜಯನಗರ, ಚಾಮರಾಜಪೇಟೆಯಲ್ಲಿ ಮಳೆ ಅಬ್ಬರಿಸಿದ್ದು, ರಸ್ತೆಗಳೆಲ್ಲ ಜಲಾವೃತವಾಗಿದ್ದವು. ಕೋರಮಂಗಲ 4ನೇ ಬ್ಲಾಕ್‌, ಸಿಟಿ ಬೆಡ್‌ ಭಾಸ್ಕರ್‌ ರಾವ್‌ ಪಾರ್ಕ್ ಹಾಗೂ ಶ್ರೀಕಂಠೇಶ್ವರ ಪಾರ್ಕ್ ಸುತ್ತಮುತ್ತಲ ರಸ್ತೆಗಳು, ಮನೆಗಳು ಜಲಾವೃತವಾಗಿ ಜನ ಪರದಾಡಿದರು.

ಮಳೆಯಿಂದಾಗಿ ಅವಾಂತರ ಸೃಷ್ಟಿಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಆಯಾ ಭಾಗಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಮಾಡುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಶುಕ್ರವಾರ ಸಂಜೆ ಒಂದೇ ಸಮನೆ ಕರಾವಳಿ, ಮಲೆನಾಡಿನಲ್ಲಿ ಸುರಿವ ರೀತಿ ಮಳೆಯಾಗಿದೆ. ಗುಡುಗು, ಮಿಂಚು ಸಹಿತ ಮಳೆಯಾಗಿದ್ದನ್ನು ನೋಡಿ ಬೆಂಗಳೂರಿನ ಜನ ಅಚ್ಚರಿ ಪಟ್ಟಿದ್ದಾರೆ. ಹವಾಮಾನ ಇಲಾಖೆ, ಇನ್ನೂ ಎರಡು ದಿನ ಮಳೆಯಾಗುವ ಸೂಚನೆ ನೀಡಿದೆ. ಹೀಗಾಗಿ ಶನಿವಾರ ಮತ್ತು ಭಾನುವಾರ ಮಳೆಯಾಗಲಿದ್ದು, ಬೆಂಗಳೂರಿನ ಜನ ಎಚ್ಚರವಾಗಿರುವಂತೆ ಸೂಚನೆ ನೀಡಲಾಗಿದೆ.