ಮೀಸೆ ಮಾಮ ಪ್ರಕಾಶ್ ಹುಕ್ಕೇರಿ ನಡೆ ಯಾವ ಕಡೆ ? ಕೈ ಬಿಟ್ಟು ಕಮಲ ಹಿಡಿಯುತ್ತಾರಾ ಕದನ ಕಲಿ ? ಸಂಸತ್ ಟಿಕೆಟ್ ಕೊಟ್ಟವರಿಗೆ ಜೈ !! 

25-10-20 10:43 pm       Headline Karnataka News Network   ಕರ್ನಾಟಕ

ಕಾಂಗ್ರೆಸ್ ಹಿರಿಯ ಮುಖಂಡ, ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮುಖಂಡರಾಗಿರುವ ಪ್ರಕಾಶ್ ಹುಕ್ಕೇರಿ ಕಾಂಗ್ರೆಸಿನಿಂದ ಹೊರ ನಡೆಯಲು ಸಜ್ಜಾಗಿದ್ದಾರೆ.

ಬೆಳಗಾವಿ, ಅಕ್ಟೋಬರ್ 25: ಕಾಂಗ್ರೆಸ್ ಹಿರಿಯ ಮುಖಂಡ, ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮುಖಂಡರಾಗಿರುವ ಪ್ರಕಾಶ್ ಹುಕ್ಕೇರಿ ಕಾಂಗ್ರೆಸಿನಿಂದ ಹೊರ ನಡೆಯಲು ಸಜ್ಜಾಗಿದ್ದಾರೆ. ಈ ಬಾರಿಯ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಯಾರು ಟಿಕೆಟ್ ಕೊಡುತ್ತಾರೋ ಆ ಪಕ್ಷಕ್ಕೆ ಹೋಗಲು ರೆಡಿ ಇದ್ದೇನೆ ಎಂದು ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ. 

ಇತ್ತೀಚೆಗೆ ನಿಧನರಾದ ಬೆಳಗಾವಿ ಸಂಸದ ಸುರೇಶ್ ಅಂಗಡಿ ಕ್ಷೇತ್ರಕ್ಕೆ ಸದ್ಯದಲ್ಲೇ ಚುನಾವಣೆ ಘೋಷಣೆ ಆಗುವ ಹಿನ್ನೆಲೆಯಲ್ಲಿ ಪ್ರಕಾಶ್ ಹುಕ್ಕೇರಿ ಈ ಮಾತು ಆಡಿದ್ದಾರೆ. ಇದರ ಜೊತೆಗೇ ಬಿಜೆಪಿ ಸುರೇಶ್ ಅಂಗಡಿಯವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡಿದರೆ ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ಸುರೇಶ್ ಅಂಗಡಿ ತುಂಬ ಆತ್ಮೀಯರಾಗಿದ್ದರು. ಅವರ ಜೊತೆ ದೆಹಲಿಗೆ ತೆರಳಿ, ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅವರ ಕುಟುಂಬ ಹೊರತುಪಡಿಸಿ ಬೇರೆ ಯಾರಿಗೆ ಟಿಕೆಟ್ ನೀಡಿದರೂ ಎದುರಾಳಿಯಾಗಿ ಸ್ಪರ್ಧಿಸಲು ತಯಾರಿದ್ದೇನೆ. 

ನನ್ನ ಹೇಳಿಕೆಗೆ ಕಾಂಗ್ರೆಸ್ ಹೈಕಮಾಂಡ್ ಏನು ಕ್ರಮ ಕೈಗೊಳ್ಳುತ್ತದೋ ಕೈಗೊಳ್ಳಲಿ. ನಾನೇನು ಅವರಿಂದ ಕಾಫಿ ಕುಡಿದಿಲ್ಲ, ಚಾ ಕುಡಿದಿಲ್ಲ. ನನ್ನ ಸ್ವಂತ ಶಕ್ತಿಯಿಂದ ನಾನು ಮೇಲೆ ಬಂದಿದ್ದೇನೆ. ಕಾಂಗ್ರೆಸ್ ನಾಯಕರು ಯಾವುದಕ್ಕೆ ಹೋರಾಟ ಮಾಡಬೇಕಿತ್ತೋ ಮಾಡುತ್ತಿಲ್ಲ. ಸುಮ್ಮನೇ ಏನೇನೋ ಮಾಡುತ್ತಿದ್ದಾರೆ ಎಂದು ಪ್ರಕಾಶ ಹುಕ್ಕೇರಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸುರೇಶ ಅಂಗಡಿ ಕುಟುಂಬ ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ಕೊಡಲು ಮುಂದಾದರೆ ನಾನು ಯಾವುದೇ ಪಕ್ಷದಿಂದ ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಲು ಸಿದ್ಧ. ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ನಿಂದ, ಬಿಜೆಪಿ ಕೊಟ್ಟರೆ ಬಿಜೆಪಿಯಿಂದ, ಜೆಡಿಎಸ್ ಕೊಟ್ಟರೆ ಜೆಡಿಎಸ್ ನಿಂದ ಕಣಕ್ಕಿಳಿಯುತ್ತೇನೆ ಎಂದವರು ಹೇಳಿದ್ದಾರೆ. 

ನಾನು ಕಳೆದ ಚುನಾವಣೆಯಲ್ಲಿ ಸೋತಿದ್ದೇನೆ. ನನಗೆ ಈಗ ಯಾವುದೇ ಹಣೆಪಟ್ಟಿ ಇಲ್ಲ. ಕಾಂಗ್ರೆಸ್ ಬಿಟ್ಟಿಲ್ಲ, ಆದರೆ ಬಿಡು ಅಂದ್ರೆ ಬಿಡ್ತೀನಿ. ನನಗೆ ಆಗೋದೇನಿದೆ ಎಂದು ಪ್ರಶ್ನಿಸಿದರು. ಸುಮ್ಮನೇ ಬಾಯಿ ಮುಚ್ಚಿಕೊಂಡು ಎಷ್ಟು ದಿನ ಇರಲಿ.  ಎರಡು ವರ್ಷದಿಂದ ಕುಳಿತಿದ್ದೇನೆ. ಹೀಗೇ ಕುಳಿತರೆ ಮೂಲೆಗುಂಪು ಮಾಡುತ್ತಾರೆ ಅಷ್ಟೇ. ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡದಿದ್ದಲ್ಲಿ ನಾನು ಟಿಕೆಟ್ ಕೊಡುವ ಪಕ್ಷಕ್ಕೆ ಹೋಗಲು ರೆಡಿ ಇದ್ದೇನೆ. ನಾನಂತೂ ನೀರಲ್ಲಿ ಬಿದ್ದಿದ್ದೇನೆ. ಮುಂದೇನಾಗುತ್ತೋ ನೋಡೋಣ ಎನ್ನುವ ಮೂಲಕ ಪ್ರಕಾಶ್ ಹುಕ್ಕೇರಿ ಬಿಜೆಪಿಯತ್ತ ವಾಲುವ ಇಂಗಿತ ವ್ಯಕ್ತಪಡಿಸಿದ್ದಾರೆ.