ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ ; ವಿವಿಧ ಕ್ಷೇತ್ರಗಳ 65 ಎಲೆಮರೆಯ ಸಾಧಕರ ಆಯ್ಕೆ

28-10-20 02:06 pm       Headline Karnataka News Network   ಕರ್ನಾಟಕ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಮಂದಿಯನ್ನು ಆಯ್ಕೆ ಮಾಡಲಾಗಿದೆ. 

ಬೆಂಗಳೂರು, ಅಕ್ಟೋಬರ್ 28 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಮಂದಿಯನ್ನು ಆಯ್ಕೆ ಮಾಡಲಾಗಿದ್ದು ಆಯ್ಕೆ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯಿಂದ ಸಾಹಿತ್ಯ ಕ್ಷೇತ್ರದಲ್ಲಿ ವಲೇರಿಯನ್ ಡಿಸೋಜ (ವಲ್ಲಿವಗ್ಗ), ಸಂಗೀತ ಕ್ಷೇತ್ರದಲ್ಲಿ ಕೆ. ಲಿಂಗಪ್ಪ ಶೇರಿಗಾರ ಕಟೀಲು, ಹೊರನಾಡು ಕನ್ನಡಿಗ ಕ್ಷೇತ್ರದಲ್ಲಿ ಕುಸುಮೋದರ ದೇರಣ್ಣ ಶೆಟ್ಟಿ ಕೇಳ್ತಡ್ಕ ಅವರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ಎಂ.ಕೆ. ರಮೇಶ್ ಆಚಾರ್ಯ ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಸಂಘ- ಸಂಸ್ಥೆ ವಿಭಾಗದಲ್ಲಿ ಧರ್ಮೋತ್ಥಾನ ಟ್ರಸ್ಟ್ ,  ಧರ್ಮಸ್ಥಳ ಆಯ್ಕೆಗೊಂಡಿದೆ. ಉಳಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಎಲೆಮರೆಯ ಕಾಯಿಗಳಾಗಿ ಉಳಿದ ಸಾಧಕರನ್ನು ಈ ಬಾರಿ ವಿಶೇಷವಾಗಿ ಗುರುತಿಸಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 

ಈ ಬಾರಿ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುತ್ತಿಲ್ಲ‌. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ, ಪ್ರಶಸ್ತಿ ಪ್ರದಾನವನ್ನು ನವೆಂಬರ್ 7ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ 130 ಮಂದಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 26 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 65 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿದೆ.