ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ; ಹೈಕೋರ್ಟಲ್ಲೂ ಕೆ.ಜೆ.ಜಾರ್ಜ್ ಕ್ಲೀನ್ ಚಿಟ್

04-11-20 06:09 pm       Bangalore Correspondent   ಕರ್ನಾಟಕ

ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಕ್ಕೀಡಾಗಿದ್ದ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ.

ಬೆಂಗಳೂರು, ನವೆಂಬರ್ 04: ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಕ್ಕೀಡಾಗಿದ್ದ ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಹೈಕೋರ್ಟ್ ಕ್ಲೀನ್ ಚಿಟ್ ನೀಡಿದೆ.

ಪ್ರಕರಣದಲ್ಲಿ ಜಾರ್ಜ್ ಪಾತ್ರವಿಲ್ಲ ಎಂದಿರುವ ಹೈಕೋರ್ಟ್, ಆ ಕುರಿತು ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಸಿಬಿಐ ಮತ್ತು ಸಿಐಡಿ ತನಿಖಾ ತಂಡಗಳು ಜಾರ್ಜ್ ಬಗ್ಗೆ ಕ್ಲೀನ್ ಚಿಟ್ ನೀಡಿತ್ತು. ಅಲ್ಲದೆ, ಪ್ರಕರಣದಲ್ಲಿ ಜಾರ್ಜ್ ಪಾತ್ರವಿಲ್ಲ ಎಂದು ತನಿಖಾ ತಂಡಗಳು ನೀಡಿದ್ದ ಬಿ ರಿಪೋರ್ಟನ್ನು ಜಾರ್ಜ್ ಹೈಕೋರ್ಟಿಗೆ ಸಲ್ಲಿಸಿದ್ದಾರೆ. ಇದನ್ನು ಪುರಸ್ಕರಿಸಿದ ಹೈಕೋರ್ಟ್, ಪ್ರತಿವಾದಿಗಳ ಅರ್ಜಿಯನ್ನು ತಳ್ಳಿಹಾಕಿದೆ.

ಮಂಗಳೂರಿನ ಐಜಿ ಕಚೇರಿಯಲ್ಲಿ ಡಿವೈಎಸ್ಪಿ ಆಗಿದ್ದ ಗಣಪತಿ 2016, ಜುಲೈ 17ರಂದು ಮಡಿಕೇರಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಗ್ಗೆ ಭಾರೀ ಶಂಕೆ ವ್ಯಕ್ತವಾಗಿತ್ತು. ಅಲ್ಲದೆ, ಸಾವಿಗೂ ಮುನ್ನ ಗಣಪತಿ, ಮಡಿಕೇರಿಯಲ್ಲಿ ಸ್ಥಳೀಯ ಸುದ್ದಿ ವಾಹಿನಿಗೆ ಸಂದರ್ಶನ ನೀಡಿ, ತನಗೆ ಗೃಹ ಸಚಿವ ಕೆ.ಜೆ. ಜಾರ್ಜ್, ಹಿರಿಯ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಕಿರುಕುಳ ನೀಡುತ್ತಿದ್ದಾರೆ. ತಾನು ಸಾವನ್ನಪ್ಪಿದರೆ ಅದಕ್ಕೆ ಅವರೇ ಹೊಣೆ ಎಂದು ಹೇಳಿಕೆ ನೀಡಿದ್ದರು. ಅದೇ ದಿನ ಸಂಜೆ ಗಣಪತಿ ಮಡಿಕೇರಿಯ ಲಾಡ್ಜ್ ನಲ್ಲಿ ನಿಗೂಢ ಸಾವು ಕಂಡಿದ್ದರು. ಪ್ರಕರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತಲ್ಲದೆ ಮಂಗಳೂರಿನ ಚರ್ಚ್ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಕೆ.ಜೆ. ಜಾರ್ಜ್, ಡಿವೈಎಸ್ಪಿ ಗಣಪತಿಗೆ ಕಿರುಕುಳ ನೀಡುತ್ತಿದ್ದರೇ ಎಂಬ ಅನುಮಾನ ಕೇಳಿಬಂದಿತ್ತು.