parishad elections, JDS, BJP: ಪರಿಷತ್ ಚುನಾವಣೆ ಮೈತ್ರಿ ಸೂತ್ರದಲ್ಲಿ ಗೊಂದಲ ; ಎರಡು ಸ್ಥಾನಕ್ಕೆ ಜೆಡಿಎಸ್ ಪಟ್ಟು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಇಕ್ಕಟ್ಟು, ಘೋಷಿತ ಅಭ್ಯರ್ಥಿ ಹೆಸರನ್ನು ಪೆಂಡಿಂಗ್ ಇಟ್ಟ ಬಿಜೆಪಿ !

13-05-24 05:57 pm       Bangalore Correspondent   ಕರ್ನಾಟಕ

ವಿಧಾನ ಪರಿಷತ್ತಿನ ಚುನಾವಣೆಯ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದ ಬಿಜೆಪಿಯಲ್ಲಿ ಗೊಂದಲ ಎದ್ದಿದೆ. ಹೈಕಮಾಂಡ್ 5-1ರ ಮೈತ್ರಿ ಸೂತ್ರದಡಿ ಟಿಕೆಟ್ ಘೋಷಣೆ ಮಾಡಿದ್ದರೆ, ರಾಜ್ಯ ನಾಯಕರು 4-2ರ ಸೂತ್ರ ಮುಂದಿಟ್ಟು ಎರಡು ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟು ಕೊಡಲು ಮುಂದಾಗಿದ್ದಾರೆ.

ಬೆಂಗಳೂರು, ಮೇ 13: ವಿಧಾನ ಪರಿಷತ್ತಿನ ಚುನಾವಣೆಯ ಐದು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದ್ದ ಬಿಜೆಪಿಯಲ್ಲಿ ಗೊಂದಲ ಎದ್ದಿದೆ. ಹೈಕಮಾಂಡ್ 5-1ರ ಮೈತ್ರಿ ಸೂತ್ರದಡಿ ಟಿಕೆಟ್ ಘೋಷಣೆ ಮಾಡಿದ್ದರೆ, ರಾಜ್ಯ ನಾಯಕರು 4-2ರ ಸೂತ್ರ ಮುಂದಿಟ್ಟು ಎರಡು ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟು ಕೊಡಲು ಮುಂದಾಗಿದ್ದಾರೆ. ಬೆಂಗಳೂರು ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಪಾಲಿಗೆ ಬಿಟ್ಟುಕೊಡಲು ಸಂಧಾನ ಸೂತ್ರ ರಚಿಸಿದ್ದಾರೆ.

ಆದರೆ, ಈ ಕ್ಷೇತ್ರಕ್ಕೆ ಈಗಾಗಲೇ ಬಿಜೆಪಿ ಹೈಕಮಾಂಡ್ ಎಬಿವಿಪಿ ಹಿನ್ನೆಲೆಯ ಈ.ಸಿ. ನಿಂಗರಾಜು ಗೌಡ ಅವರ ಹೆಸರು ಘೋಷಣೆ ಮಾಡಿದೆ. ನಿಂಗರಾಜು ತಾನೇ ಅಧಿಕೃತ ಅಭ್ಯರ್ಥಿಯೆಂದು ಮಾಧ್ಯಮಕ್ಕೆ ಹೇಳಿಕೆಯನ್ನು ನೀಡಿದ್ದರೆ, ಜೆಡಿಎಸ್ ನಾಯಕರು ಈ ಕ್ಷೇತ್ರದಲ್ಲಿ ತಮ್ಮದೇ ಅಭ್ಯರ್ಥಿ ಇಳಿಸುತ್ತೇವೆಂದು ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿರುವ ನಿಂಗರಾಜು ಗೌಡ, ಬಿಜೆಪಿ ಒಂದು ಬಾರಿ ಟಿಕೆಟ್ ಫೈನಲ್ ಮಾಡಿದ ಮೇಲೆ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ಪರವಾಗಿ ನಾವು ಕೆಲಸ ಮಾಡಿದ್ದೇವೆ. ಜೆಡಿಎಸ್ ನಾಯಕರು ನನ್ನ ಪರವಾಗಿ ಇದ್ದಾರೆಂಬ ವಿಶ್ವಾಸ ಇದೆ. ಮೇ 15ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ.

ಇದೇ ವೇಳೆ, ಜೆಡಿಎಸ್ ನಾಯಕ ಶಾಸಕ ಸಾರಾ ಮಹೇಶ್ ಪ್ರತಿಕ್ರಿಯಿಸಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ನಮ್ಮದೇ ಪ್ರಾಬಲ್ಯ ಇದೆ, ಮೈತ್ರಿ ಸೂತ್ರದಡಿ ನಾವೇ ಈ ಸೀಟು ಪಡೆಯುತ್ತೇವೆ. ಕ್ಷೇತ್ರದಲ್ಲಿ ಮಾಜಿ ಎಂಎಲ್ಸಿ ಶ್ರೀಕಂಠೇಗೌಡ ಮತ್ತು ವಿವೇಕಾನಂದ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಒಬ್ಬರಿಗೆ ಟಿಕೆಟ್ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

BJP, JD(S) to fight Legislative Council polls together, Prajwal case has no  connection with the alliance': Yediyurappa - The Economic Times

ಮಾಜಿ ಸಿಎಂ ಯಡಿಯೂರಪ್ಪ ಮತ್ತು ವಿಪಕ್ಷ ನಾಯಕ ಆರ್. ಅಶೋಕ್, 4-2ರ ಮೈತ್ರಿ ಸೂತ್ರವನ್ನು ಪ್ರತಿಪಾದಿಸುತ್ತ ಬಂದಿದ್ದರು. ಆದರೆ, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸಿನಿಂದಾಗಿ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಬೇಡ ಎನ್ನುವುದು ಬಿಜೆಪಿ ಒಳಗಿನ ಇತರೇ ನಾಯಕರ ಮಾತಾಗಿತ್ತು. ರಾಷ್ಟ್ರ ಮಟ್ಟದಲ್ಲಿ ಮೈತ್ರಿ ಮಾತುಕತೆ ಆಗಿರುವುದರಿಂದ ಎರಡು ಮಾತು ಆಡುವುದು ಸಾಧ್ಯವಿರಲಿಲ್ಲ. ಹಾಗಾಗಿ, ಹಾಲಿ ಎಂಎಲ್ಸಿ ಭೋಜೇಗೌಡರ ನೈರುತ್ಯ ಶಿಕ್ಷಕರ ಕ್ಷೇತ್ರ ಹೊರತುಪಡಿಸಿ ಉಳಿದ ಐದು ಕ್ಷೇತ್ರಗಳಿಗೂ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಬೆಂಗಳೂರು ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕಾಗಿ ಪಟ್ಟು ಹಿಡಿದಿದ್ದು, ಯಡಿಯೂರಪ್ಪ ಆ ಕ್ಷೇತ್ರವನ್ನು ಬಿಟ್ಟು ಕೊಡಲು ಮುಂದಾಗಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಈ ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನು ಪೆಂಡಿಂಗ್ ಮಾಡುವಂತೆ ಸೂಚನೆ ನೀಡಿದೆ.

ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯಲ್ಲಿ ಒಂದು ಬಾರಿ ಟಿಕೆಟ್ ಘೋಷಣೆಯಾದ ಬಳಿಕ ನಿರಾಕರಣೆ ಮಾಡುವುದು, ಅಭ್ಯರ್ಥಿ ಬದಲಿಸುವ ಸಂಪ್ರದಾಯ ಇಲ್ಲ. ಈ ರೀತಿ ಮಾಡಿದರೆ ಪಕ್ಷದ ಪಾಲಿಗೆ ಹಿನ್ನಡೆಯ ಸಂದೇಶಕ್ಕೆ ಕಾರಣವಾಗುತ್ತದೆ. ಪ್ರಾದೇಶಿಕ ಪಕ್ಷದ ಎದುರು ಮಂಡಿಯೂರಿದಂತೆ ಎನ್ನುವ ಭಾವನೆ ಕಾರ್ಯಕರ್ತರಲ್ಲಿ ಬರುತ್ತದೆ. ಈ ರೀತಿಯ ವಿಶ್ಲೇಷಣೆ ಸದ್ಯ ಪಕ್ಷದಲ್ಲಿದ್ದು, ಸೀಟು ಬಿಟ್ಟುಕೊಟ್ಟರೂ ಮೈತ್ರಿಯಲ್ಲಿ ಒಮ್ಮತ ಇಲ್ಲದೆ ಮಂಡ್ಯ, ಮೈಸೂರಿನಲ್ಲಿ ಅಸಮಾಧಾನ ಮೂಡುವ ಸಾಧ್ಯತೆಯೇ ಹೆಚ್ಚಿದೆ.

Confusion in the council election alliance formula; JDS folds for two seats in parishad elections.