Honnavara Fire: ಹೊನ್ನಾವರದಲ್ಲಿ ಗುಜರಿ ಗೋಡೌನ್‌ಗೆ ತಗುಲಿದ ಬೆಂಕಿ ; ಲಾರಿಸಹಿತ ವಸ್ತುಗಳು ಅಗ್ನಿಗಾಹುತಿ

27-02-25 05:50 pm       HK News Desk   ಕರ್ನಾಟಕ

ಗುಜರಿ ಸಾಮಾನು ರಾಶಿ ಹಾಕಿದ್ದ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡು, ಲಾರಿಸಹಿತ ಅಪಾರ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಜಿಲ್ಲೆಯ ಹೊನ್ನಾವರದಲ್ಲಿ ಸಂಭವಿಸಿತು.

ಕಾರವಾರ, ಫೆ 27: ಗುಜರಿ ಸಾಮಾನು ರಾಶಿ ಹಾಕಿದ್ದ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡು, ಲಾರಿಸಹಿತ ಅಪಾರ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಜಿಲ್ಲೆಯ ಹೊನ್ನಾವರದಲ್ಲಿ ಸಂಭವಿಸಿತು.

ಗುಣವಂತೆ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿಯೇ ರಾಶಿ ಹಾಕಿದ್ದ ಗುಜರಿ ಸಾಮಾನು ಅಂಗಡಿಗೆ ಬೆಂಕಿ ಬಿದ್ದಿದೆ. ಮಧ್ಯಾಹ್ನದ ಸುಡು ಬಿಸಿಲಿನ ವೇಳೆ ಘಟನೆ ನಡೆಯಿತು. ನೋಡನೋಡುತ್ತಿದ್ದಂತೆ ಜ್ವಾಲೆ ಸಂಪೂರ್ಣ ಅಂಗಡಿಯನ್ನೇ ಆವರಿಸಿಕೊಂಡಿತು. ದಟ್ಟ ಹೊಗೆಯಿಂದ ಸಂಪೂರ್ಣ ಪ್ರದೇಶ ಕಾಣದಂತಾಗಿ ಅಂಗಡಿ ಪಕ್ಕದಲ್ಲೇ ಇದ್ದ ಲಾರಿ ಕೂಡ ಬೆಂಕಿಗೆ ಆಹುತಿಯಾಯಿತು.

ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಆರದ ಕಾರಣ ಮತ್ತು ಪಕ್ಕದ ಪ್ರದೇಶಕ್ಕೂ ಆವರಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಭಟ್ಕಳ ಅಗ್ನಿಶಾಮಕ ತಂಡಕ್ಕೂ ಮಾಹಿತಿ ನೀಡಲಾಯಿತು. ಇದೀಗ ಈ ಪ್ರದೇಶ ಸಂಪೂರ್ಣ ಹೊಗೆ ಹಾಗೂ ಬೆಂಕಿಯಿಂದ ಆವೃತವಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Honnavara scrap godown catches fire, truck including items burnt into ashes.