ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಸಿಐಎಸ್ಎಫ್ ಭದ್ರತಾ ಸಿಬಂದಿಗೆ ಹಲ್ಲೆಗೈದ ವಿದೇಶಿಗ, ಪ್ರಶ್ನಿಸಿದ ಮಹಿಳಾ ಪ್ರಯಾಣಿಕೆಗೂ ಹಲ್ಲೆ ! 

28-02-25 05:52 pm       Bangalore Correspondent   ಕರ್ನಾಟಕ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ವಿದೇಶಿ ವ್ಯಕ್ತಿಯೊಬ್ಬ ಭದ್ರತೆಗೆ ನಿಯೋಜಿಸಲ್ಪಟ್ಟ ಸಿಐಎಸ್ಎಫ್ ಸಿಬ್ಬಂದಿಗೆ ಹಲ್ಲೆಗೈದು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ನಡೆದಿದ್ದು, ಎಫ್ಐಆರ್ ದಾಖಲಾಗಿದೆ.

ಬೆಂಗಳೂರು, ಫೆ.28 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ವಿದೇಶಿ ವ್ಯಕ್ತಿಯೊಬ್ಬ ಭದ್ರತೆಗೆ ನಿಯೋಜಿಸಲ್ಪಟ್ಟ ಸಿಐಎಸ್ಎಫ್ ಸಿಬ್ಬಂದಿಗೆ ಹಲ್ಲೆಗೈದು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ನಡೆದಿದ್ದು, ಎಫ್ಐಆರ್ ದಾಖಲಾಗಿದೆ.

ಆಸ್ಟ್ರೇಲಿಯನ್ ಮತ್ತು ಯುಕೆ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಫಾಯಿಲ್ಸ್ ಎಲಿಯಟ್ ಬ್ಲೇರ್ ಎಂಬ ವಿದೇಶಿ ವ್ಯಕ್ತಿ ಭದ್ರತಾ ಸಿಬ್ಬಂದಿ, ಇನ್ನೊಬ್ಬ ಮಹಿಳೆ ಸೇರಿ ಪ್ರಯಾಣಿಕರ ಮೇಲೂ ಹಲ್ಲೆ ನಡೆಸಿದ್ದಾನೆ. ಘಟನೆ ಬೆನ್ನಲ್ಲೇ ವಿದೇಶಿಗನನ್ನು ವಶಕ್ಕೆ ಪಡೆದ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಬುಧವಾರ ರಾತ್ರಿ 10.20ಕ್ಕೆ ನಿರ್ಗಮನ ವಲಯದಲ್ಲಿ ಭದ್ರತಾ ತಪಾಸಣೆ ನಡೆಯುತ್ತಿತ್ತು. ಸರತಿ ಸಾಲಿನಲ್ಲಿ ಬಂದಿದ್ದ ಬ್ಲೇರ್ ಅವರ ಬ್ಯಾಗ್ ಗಳನ್ನೂ ಸಿಐಎಸ್ಎಫ್ ಸಿಬ್ಬಂದಿ ತಪಾಸಣೆ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದ್ದಕ್ಕಿದ್ದಂತೆ ಸಿಬ್ಬಂದಿಗಳ ಮೇಲೆ ವ್ಯಕ್ತಿ ಹೌಹಾರಿದ್ದಾನೆ. ಸಿಐಎಸ್ಎಫ್ ಕಾನ್‌ಸ್ಟೇಬಲ್ ರಾಮ್‌ಕುಮಾರ್ ದಲೇರಾ ಅವರನ್ನು ನಿಂದಿಸಿದ್ದಾನೆ. ಆತನನ್ನು ಸಮಾಧಾನಪಡಿಸಲು ಯತ್ನಿಸಿದ ಇತರೇ ಸಿಬ್ಬಂದಿಗಳನ್ನೂ ನಿಂದಿಸಿದ್ದಾನೆ. ಪ್ರಶ್ನೆ ಮಾಡಿದ್ದಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆ ಹಾಗೂ ಇತರ ಪ್ರಯಾಣಿಕರ ಮೇಲೂ ಹಲ್ಲೆ ನಡೆಸಲು ಮುಂದಾಗಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಸಿಐಎಸ್‌ಎಫ್ ಸಬ್ ಇನ್‌ಸ್ಪೆಕ್ಟರ್ ಅರವಿಂದ್ ಕುಮಾರ್ ಮಿಶ್ರಾ ವಿದೇಶಿ ವ್ಯಕ್ತಿಯ ವಿರುದ್ದ ವಿಮಾನ ನಿಲ್ದಾಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆತನ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ವಿಮಾನ ಯಾನಕ್ಕೂ ಅವಕಾಶ ನೀಡಲಾಗಿಲ್ಲ ಎಂದು ಅರವಿಂದ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

Foreigner Assaults CISF Personnel and Female Passenger at Kempegowda Airport.